ಬಜೆಟ್ ಅಧಿವೇಶನ ಮುಕ್ತಾಯ, ಸಾಧನೆ ಏನು?
ಬೆಂಗಳೂರು, ಆ.1 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಮುಕ್ತಾಯಗೊಂಡಿದೆ. ಬಜೆಟ್ ಮೇಲಿನ ಚರ್ಚೆ ಜೊತೆಗೆ ವಿಪಕ್ಷ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಪರಾಮರ್ಶೆಗಳೂ ಅಧಿವೇಶನದಲ್ಲಿ ನಡೆದವು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಚೊಚ್ಚಲ ಬಜೆಟ್ ಮಂಡಿಸುವುದರೊಂದಿಗೆ ಜುಲೈ 12ರಂದು ಪ್ರಾರಂಭವಾದ ಬಜೆಟ್ ಅಧಿವೇಶನ 14 ದಿನಗಳ ಕಾಲ ನಡೆಯಿತು. ಸಭಾತ್ಯಾಗ ನಡೆಯದೆ ಉತ್ತಮ ಚರ್ಚೆಗಳು ನಡೆದವು ಎಂಬುದೇ ಸಮಾಧಾನದ ಸಂಗತಿ.
ಬಜೆಟ್ ಅಧಿವೇಶನ ಸರಾಗವಾಗಿ ನಡೆಯುವಲ್ಲಿ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಶ್ರಮವೂ ಇದೆ. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಗಲಾಟೆ ಮಾಡಿದರೆ ಮಾತಿನಲ್ಲೇ ಅವರಿಗೆ ಉತ್ತರ ನೀಡಿ ಕಲಾಪ ಮುಂದುವರೆಸಿದ ಕೀರ್ತಿ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲುತ್ತದೆ.
ನಮ್ಮ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಯಡಿಯೂರಪ್ಪ ಮಾತು, ನಮ್ಮ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಬೇಕಿತ್ತು ಮತ್ತು ಸಿದ್ದರಾಮಯ್ಯಗೆ ಸಿಎಂ ಪಟ್ಟ ತಪ್ಪಿಸಿದ್ದು ನಾನೇ ಎಂಬ ಹೇಳಿಕೆ. ದೇವೇಗೌಡರ ಫೋಟೋ ವಿವಾದ ಸದನದಲ್ಲಿ ಈ ಬಾರಿ ಬಜೆಟ್ ಗಿಂತ ಹೆಚ್ಚನ ಸದ್ದು ಮಾಡಿದವು.

ಬಜೆಟ್ ಮಂಡನೆ
ಜುಲೈ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 1.21 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುವುದರೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಯಿತು. ಶುಕ್ರವಾರ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ತಕ್ಷಣ ದೆಹಲಿಗೆ ಹೋದರು. ಸೋಮವಾರದಿಂದ ಬಜೆಟ್ ಮೇಲಿನ ಚರ್ಚೆ ಪ್ರಾರಂಭವಾಯಿತು.

ದೊಡ್ಡ ಸದ್ದು ಮಾಡಿದ ದೇವೇಗೌಡರು
ಸಿಎಂ ಕಚೇರಿಯಿಂದ ಮಾಜಿ ಪ್ರಧಾನಿ ದೇವೇಗೌಡರ ಫೋಟೋವನ್ನು ತೆಗೆದ ವಿವಾದ ವಿಧಾನಸಭೆಯಲ್ಲಿ ಎರಡು ದಿನ ಭಾರೀ ಚರ್ಚೆಯಾಯಿತು. ಸಿದ್ದರಾಮುಯ್ಯ ಸೇಡಿನ ರಾಜಕಾರಣವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡವು. ಕೊನೆಗೆ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ, ಫೋಟೋವನ್ನು ಅಲ್ಲಿ ಹಾಕುವುದಾಗಿ ಸದನದಲ್ಲಿ ಹೇಳಿಗೆ ನೀಡಿ ವಿವಾದ ಬಹೆಹರಿಸಿದರು.

ವಿಧೇಯಕಗಳ ಅಂಗೀಕಾರ
ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಧನವಿನಿಯೋಗ ವಿಧೇಯಕ-2013, ಪೌರನಿಗಮಗಳ ತಿದ್ದುಪಡಿ ವಿಧೇಯಕ-2013, ಕರ್ನಾಟಕ ಉದ್ಯಾನವನ ಸಂರಕ್ಷಣಾ ತಿದ್ದುಪಡಿ ವಿಧೇಯಕ-2013 ಅಂಗೀಕಾರವಾಯಿತು. ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ವರದಿಗೂ ಅನುಮೋದನೆ ದೊರೆಯಿತು.

ಅಡ್ಜೆಸ್ಟ್ ಮೆಂಟ್ ರಾಜಕಾರಣ
ಬಜೆಟ್ ಮೇಲಿನ ಚರ್ಚೆಯಲ್ಲಿ ಇತರ ವಿಷಯಗಳು ಚರ್ಚೆ ಆದವು. "ಬಿ.ಎಸ್.ಯಡಿಯೂರಪ್ಪ ನಮ್ಮನ್ನು ಅಡ್ಜೆಸ್ಟ್ ಮಾಡಿಕೊಂಡಿದ್ದರೆ ನಿಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ" ಎಂಬ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸದನದಲ್ಲಿ ಅಚ್ಚರಿ ಮೂಡಿಸಿತ್ತು.

ಪರಿಷತ್ ನಲ್ಲಿ ವಿರೋಧ
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ - 2013 ವಿಧಾನಸಭೆಯಲ್ಲಿ ಅಂಗೀಕಾರವಾದರೂ ವಿಧಾನ ಪರಿಷತ್‌ನಲ್ಲಿ ವಿರೋಧ ವ್ಯಕ್ತವಾಗಿ ಜಂಟಿ ಪರಿಶೀಲನಾ ಸಮಿತಿಗೆ ಕಳುಹಿಸಲಾಯಿತು. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಎರಡನೇ ತಿದ್ದುಪಡಿ ವಿಧೇಯಕ-2013 ವಿಧಾನಸಭೆಯಲ್ಲಿ ಅಂಗೀಕಾರವಾಯಿತಾದರೂ ಪರಿಷತ್‌ನಲ್ಲಿ ಮಂಡನೆಯಷ್ಟೆ ಸಾಧ್ಯವಾಯಿತು. ಬಿಜೆಪಿ ಬಿಜೆಪಿ ಸದಸ್ಯರು ಪರಿಷತ್ ನಲ್ಲಿ ಸರ್ಕಾರಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದರು.

ಯಡಿಯೂರಪ್ಪ ಆತ್ಮಾವಲೋಕನ
ಬಜೆಟ್ ಅಧಿವೇಶನದಲ್ಲಿ ಬಿ.ಎಸ್.ಯಡಿಯೂರಪ್ಪ ಆತ್ಮಾವಲೋಕನ ಮಾಡಿಕೊಂಡರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 7-8 ಸ್ಥಾನಗಳನ್ನು ಮಾತ್ರ ಕರ್ನಾಟಕದಲ್ಲಿ ಗಳಿಸಲಿದೆ. ಅದಕ್ಕೆ ಬೇಕಾದ ಕಾರ್ಯತಂತ್ರವನ್ನು ನಾವು ರೂಪಿಸುತ್ತೇವೆ ಎಂದು ಬಿಜೆಪಿಗೆಯೊಂದಿಗಿನ ಮೈತ್ರಿಯ ಸುಳಿವನ್ನು ಸದನದಲ್ಲಿ ಬಿಟ್ಟುಕೊಟ್ಟರು.

ಸರ್ಕಾರಕ್ಕೆ ಹಿನ್ನಡೆ
ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ ) ವಿಧೇಯಕ-2012 ಹಾಗೂ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2013 ಹಾಗೂ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕ-2013 ಉಭಯ ಸದನಗಳನ್ನು ಮಂಡಿಸಲು ಕೊನೆಯ ದಿನದ ವರೆಗೂ ಸರ್ಕಾರ ಹೋರಾಟ ನಡೆಸಿತು. ಆದರೆ. ಅದು ಸಾಧ್ಯವಾಗಲಿಲ್ಲ.

ಪ್ರತಿಪಕ್ಷ ಬಿಜೆಪಿ ಗೆಲುವು
ಪ್ರತಿಪಕ್ಷ ಬಿಜೆಪಿ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ನಮ್ಮ ಊರು-ನಮ್ಮ ರಸ್ತೆ, ಭೂಚೇತನ, ಸುವರ್ಣ ಗ್ರಾಮ ಯೋಜನೆಗಳನ್ನು ಸರ್ಕಾರ ಮುಂದುವರೆಸುವಂತೆ ಒತ್ತಡ ಹೇರಿತು. ಸರ್ಕಾರ ಈ ಯೋಜನೆಗಳನ್ನು ಮುಂದುವರೆಸಲಿದೆ ಎಂದು ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕರಿಗೆ ಬಂಪರ್
ಬಜೆಟ್ ಅಧಿವೇಶನದಲ್ಲಿ ಶಾಸಕರ ನಿಧಿ ಮೊತ್ತವನ್ನು 1 ಕೋಟಿಯಿಂದ 2 ಕೋಟಿ ರೂ.ಗಳಿಗೆ ಏರಿಕೆ ಮಾಡಿ ಸಿದ್ದರಾಮಯ್ಯ ಆದೇಶ ಹೊರಡಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಶಾಸಕರ ನಿಧಿ ಹೆಚ್ಚಳದ ಪ್ರಸ್ತಾಪ ಕೇಳಿಬಂದಿತ್ತು, ಅದನ್ನು ಸಿಎಂ ಮೂಲಕ ಜಾರಿಗೆ ತಂದರು. ಆದ್ದರಿಂದ ಬಜೆಟ್ ಅಧಿವೇಶನ ಶಾಸಕರಿಗೆ ಬಂಪರ್ ಕೊಡುಗೆ ನೀಡಿದೆ.












Click it and Unblock the Notifications