108 ಸಿಬ್ಬಂದಿ ಮುಷ್ಕರ, ಭಯ ಬೇಡ ಸೇವೆ ಲಭ್ಯವಿದೆ

ರಾಜ್ಯದಲ್ಲಿರುವ ಸುಮಾರು 517 ಆಂಬುಲೆನ್ಸ್ ಗಳ ಕೀಯನ್ನು ಸಂಸ್ಥೆಗೆ ಮರಳಿಸಿರುವ ಸುಮಾರು 2,500 ಚಾಲಕರು, ಸ್ಟಾಫ್ ನರ್ಸಗಳು ತಮ್ಮ ಸೇವೆ ಸ್ಥಗಿತಗೊಳಿಸಿದ್ದಾರೆ. ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು ಸರ್ಕಾರ ಸಿದ್ಧವಾಗಿದೆ.
ಕೆಆಸ್ಆರ್ ಟಿಸಿ ಡ್ರೈವರ್ ಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ನರ್ಸ್ ಗಳನ್ನು ಸರ್ಕಾರ 108 ಸೇವೆಗೆ ನಿಯೋಜಿಸಿದೆ. ತುಮಕೂರು ಜಿಲ್ಲೆಯಲ್ಲಿ 46 ಕೆಎಸ್ಆರ್ ಟಿಸಿ ಡ್ರೈವರ್ ಗಳು ಶನಿವಾರದಿಂದ 108 ಸೇವೆ ನಿಯೋಜನೆಗೊಂಡಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿರುವ 108 ನೌಕರರು ಭಾನುವಾರದಿಂದ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಲಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ತನಕ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಿಂದೆ ಆರೋಗ್ಯ ಕವಚ ಸಿಬ್ಬಂದಿ ಪ್ರತಿಭಟನೆ ಮಾಡಿದಾಗ, ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಆದರೆ, ಈಗ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಆದ್ದರಿಂದ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕು.
ಎಲ್ಲಾ ಜಿಲ್ಲೆಗಳ 108 ಆಂಬುಲೆನ್ಸ್ ಗಳನ್ನು ಜಿಲ್ಲಾಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತುರ್ತು ಕರೆ ಬಂದಾಗ, ಕೆಎಸ್ಆರ್ ಟಿಸಿ ಡ್ರೈವರ್ ಮತ್ತು ಸರ್ಕಾರಿ ಆಸ್ಪತ್ರೆಯ ನರ್ಸ್ ಗಳನ್ನು ಕಳುಹಿಸುತ್ತಿದ್ದಾರೆ.
ಆರೋಗ್ಯ ಸಚಿವರ ಅಭಯ : ರಾಜ್ಯದಲ್ಲಿ 108 ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದರು ಜನರು ಭಯ ಪಡಬೇಕಾಗಿಲ್ಲ. ಆಂಬುಲೆನ್ಸ್ ಸೇವೆ ಜನರಿಗೆ ದೊರಕಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ರಾತ್ರಿಯಿಂದ 108ಗೆ 400 ಕರೆಗಳು ಬಂದಿದ್ದು, ಅವರಿಗೆ ಸೇವೆ ಒದಗಿಸಲಾಗಿದೆ. ಸಾರ್ವಜನಿಕರು ತುರ್ತು ಸಮಯದಲ್ಲಿ 108ಗೆ ಕರೆ ಮಾಡಬಹುದು ಎಂದು ಸಚಿವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳೇನು
* ಕೆಲಸದ ಭದ್ರತೆ ನೀಡಬೇಕು
* 15 ಸಾವಿರ ಕನಿಷ್ಠ ವೇತನ ನಿಗದಿಗೊಳಿಸಬೇಕು
* ಆಂಬ್ಯುಲೆನ್ಸ್ ನಿರ್ವಹಣಾ ವ್ಯವಸ್ಥೆಯನ್ನು ಸರ್ಕಾರ ತೆಗೆದುಕೊಳ್ಳಬೇಕು
* ಕಂಪನಿಗಳು ನೌಕರರಿಗೆ ಕೊಡುತ್ತಿರುವ ಕಿರುಕುಳ ತಪ್ಪಿಸಬೇಕು












Click it and Unblock the Notifications