ಗಣಿ ಗಲಾಟೆ, ಸಿಎಂ ಕಚೇರಿಯಿಂದ ಡಿಸಿಗೆ ಫೋನ್!

ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸುತ್ತಿದ್ದಾಗ, ಡಿಸಿ ಎಸ್.ಎನ್. ನಾಗರಾಜ್ ಅವರು ನೀಡಿರುವ ಹೇಳಿಕೆ ಸಿಡಿಯಲ್ಲಿದೆ. ಮೊಬೈಲ್ ನಲ್ಲಿ ಚಿತ್ರೀಕರಿಸುವ ದೃಶ್ಯದಲ್ಲಿ ಡಿಸಿ ಮಾತನಾಡಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.
ರೈತ ಸಂಘದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿರುವ ಡಿಸಿ ನಾಗರಾಜ್, ಕಲ್ಲು ಗಣಿಗಾರಿಕೆ ತಡೆಯದಂತೆ ನನಗೆ ಸಿಎಂ ಕಚೇರಿಯಿಂದ ಸಂದೇಶ ಬಂದಿದೆ ಹೇಳಿಕೆ ನೀಡಿರುವುದು ಸಿಡಿಯಲ್ಲಿ ದಾಖಲಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಕಾರ್ಯಕರ್ತರು ಈ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಗಣಿಗಾರಿಕೆ ತಡೆಯುವಂತೆ ತಹಶೀಲ್ದಾರರಿಗೆ ಸೂಚಿಸಿದ್ದರು.
ಆದರೆ, ಗಣಿಗಾರಿಕೆಯನ್ನು ನಿಲ್ಲಿಸಲು ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಹೋರಾಟವನ್ನು ಮತ್ತಷ್ಟು ಹೆಚ್ಚಿಸಿರುವ ರೈತ ಸಂಘದವರು ಗುರುವಾರ ಸಿಡಿ ಬಿಡುಗಡೆ ಮಾಡಿದ್ದಾರೆ. ತಹಶೀಲ್ದಾರರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಯಾರಿಗೆ ಸೇರಿದ್ದು : ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಜಾಗ ಸ್ಥಳೀಯ ಕಾಂಗ್ರೆಸ್ ಮುಖಂಡ ಗುತ್ತೇದಾರ್ ಎಂ.ಈರಣ್ಣ ಅವರಿಗೆ ಸೇರಿದೆ. ಇನ್ನೂ 13 ಮಂದಿ ಈ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ.
ಈರಣ್ಣ ಸರ್ಕಾರದ ಮೇಲೆ ಪ್ರಭಾವ ಬೀರಿ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುತ್ತಿದ್ದಾರೆ ಎಂದು ರೈತ ಸಂಘದವರು ದೂರಿದ್ದಾರೆ. ಈ ಕುರಿತು ವಿವರವಾದ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಡಿಸಿ ಸ್ಪಷ್ಟನೆ : ರೈತ ಸಂಘದವರು ಸಿಡಿ ಬಿಡುಗಡೆ ಮಾಡಿದ ನಂತರ ಸ್ಪಷ್ಟನೆ ನೀಡಿರುವ ಡಿಸಿ ನಾಗರಾಜ್ ನನಗೆ ಸಿಎಂ ಕಚೇರಿಯಿಂದ ಕರೆ ಬಂದಿದೆ ಎಂದು ಹೇಳಿರುವುದು ಸತ್ಯ. ಆದರೆ, ಸಿಎಂ ಹೇಳಿದ್ದಾರೆ ಎಂದು ನಾನು ಮಾತನಾಡಿಲ್ಲ. ಸಿಎಂ ಆಪ್ತ ಕಾರ್ಯದರ್ಶಿ ನನ್ನೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಕಚೇರಿಯಿಂದ ಸಂದೇಶ ಬಂದಿದೆ. ಕ್ರಮ ಕೈಗೊಳ್ಳಬೇಡಿ ಎಂದು ಹೇಳಿಲ್ಲ. ಕಾನೂನಿನ ಪ್ರಕಾರ ತನಿಖೆ ನಡೆಸುವುದಾಗಿ ಡಿಸಿ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications