ಮೈಸೂರಿನಿಂದ ಲೋಕಸಭಾ ಕಣಕ್ಕೆ ಸದಾನಂದ ಗೌಡ
ಮೈಸೂರು, ಜುಲೈ 22: ಮಂಗಳೂರು ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜಯ ದಾಖಲಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಯಸಿದ್ದಾರೆ. ಮತ್ತು ಇದಕ್ಕೆ ಪಕ್ಷವೂ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದರೂ ಈಗಿನಿಂದಲೇ ಸದಾನಂದರು ಮೈಸೂರು ವಿಭಾಗದಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಮಂಗಳೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಲೋಕಸಭೆಗೆ ಪ್ರವೇಶಿಸಿದ್ದ ಸದಾನಂದ ಗೌಡ ಅವರು ಇದೀಗ ಆ ಎಲ್ಲಾ ಪ್ರದೇಶಗಳನ್ನು ಬಿಟ್ಟು ಮೈಸೂರನ್ನು ಆರಿಸಿಕೊಂಡಿದ್ದಾರೆ.

ಉದ್ದೇಶಪೂರ್ವಕವಾಗಿ ಮೈಸೂರು ಆಯ್ಕೆ
ಉದ್ದೇಶಪೂರ್ವಕವಾಗಿಯೇ ಈ ಬಾರಿ ಅವರು ಮೈಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಂಗಳೂರು ಮತ್ತು ಉಡುಪಿ-ಚಿಕ್ಕಮಗಳೂರು ರಾಜಕೀಯ ಬೆಳವಣಿಗೆಗಳೂ ಹೇತುವಾಗಿವೆ. ಈ ಭಾಗಗಳಲ್ಲಿ ಈ ಹಿಂದೆ ಬಿಜೆಪಿ ಬಲಾಢ್ಯವಾಗಿತ್ತು. ಆದರೆ ಇತ್ತೀಚೆಗೆ ಈ ಭಾಗದಲ್ಲಿ ಬಿಜೆಪಿ ಶಕ್ತಿ ಕಳೆಗುಂದತ್ತಾ ಬಂದಿದೆ.

'ಕನ್ನಡ ಪ್ರಭ' ವರದಿ
ಅದರಲ್ಲೂ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಸದಾನಂದ ಗೌಡ ಕೂಡ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ, ಇಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಹೀಗಾಗಿ ಈ ಎರಡೂ ಕ್ಷೇತ್ರಗಳನ್ನು ಬಿಟ್ಟು ಮೈಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸದಾನಂದಗೌಡ ಮುಂದಾಗಿದ್ದಾರೆ ಎಂದು 'ಕನ್ನಡ ಪ್ರಭ' ಸೋಮವಾರ ವರದಿ ಮಾಡಿದೆ.

ಬಿಜೆಪಿ ನೆಲೆ ಕಳೆದುಕೊಳ್ಳುತ್ತಿರುವ ಭೀತಿ
ಇನ್ನು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ನೀರಸ ಪ್ರದರ್ಶನ ನೀಡಿದರೂ ಮಡಿಕೇರಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಗೆದ್ದಿತ್ತು. ಹಿಂದೆ ಮಂಗಳೂರು ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದ ಈ ಎರಡೂ ಕ್ಷೇತ್ರಗಳು 2007ರಲ್ಲಿ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಸೇರಿಕೊಂಡಿದೆ. ಸದಾನಂದಗೌಡ ಅವರು ಮೈಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಇದು ಒಂದು ಪ್ರಮುಖ ಕಾರಣ ಎನ್ನಲಾಗಿದೆ.

ಮೈಸೂರಿನಲ್ಲಿ ಹಿತ
ಅದೇ ರೀತಿ ಮೈಸೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲೂ ಒಂದಷ್ಟು ಪೂರಕ ಅಂಶಗಳು ಇವೆ. ಈ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ ಸೇರಿದಂತೆ ಮೇಲ್ವರ್ಗದವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿ ಜೆಡಿಎಸ್ ಸ್ವಲ್ಪ ಪ್ರಮಾಣದಲ್ಲಿ ಶಕ್ತಿ ಹೊಂದಿದೆಯಾದರೂ ಅದು ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಷ್ಟರ ಮಟ್ಟಕ್ಕೆ ಇಲ್ಲ.
ಹೀಗಾಗಿ ಸದಾನಂದ ಗೌಡ ಅವರು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿದರೆ ಜೆಡಿಎಸ್ ಕೂಡ ಪರೋಕ್ಷವಾಗಿ ಬೆಂಬಲಿಸಬಹುದು. ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಸೇರಿದ ಹಾಲಿ ಸಂಸದ ಕಾಂಗ್ರೆಸ್‌ನ ಎಚ್ ವಿಶ್ವನಾಥ್ ವಿರುದ್ಧ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅದು ತಮಗೆ ಅನುಕೂಲವಾಗಲಿದೆ ಎಂಬುದು ಸದಾನಂದ ಗೌಡರ ಲೆಕ್ಕಾಚಾರ.

ಪಕ್ಷವೂ ಸಹಮತ ವ್ಯಕ್ತಪಡಿಸಿದೆ
ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜೆಡಿಎಸ್ ಅವರ ಬಗ್ಗೆ ಮೃಧು ಧೋರಣೆ ಅನುಸರಿಸಿತ್ತು. ಅಲ್ಲದೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಂದರ್ಭದಲ್ಲಿ ಮೈಸೂರು ಭಾಗದ ಒಕ್ಕಲಿಗ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಸದಾನಂದ ಗೌಡರಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಈ ಎಲ್ಲಾ ಅಂಶಗಳು ತಮಗೆ ಪೂರಕವಾಗಲಿದೆ ಎಂಬ ನಿರೀಕ್ಷೆ ಅವರದ್ದು. ಇದನ್ನು ಪಕ್ಷದ ಗಮನಕ್ಕೂ ಅವರು ತಂದಿದ್ದು, ಪಕ್ಷವೂ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಸದಾನಂದರಿಂದ ಈಗಿನಿಂದಲೇ ಸಿದ್ಧತೆ ಆರಂಭ
ಇನ್ನೊಂದೆಡೆ ಕಳೆದ ವಿಧಾನಸಭೆ ಚುನಾವಣೆ ಬಳಿಕ ಸದಾನಂದ ಗೌಡ ಅವರು ಮೈಸೂರು ಲೋಕಸಭೆ ಕ್ಷೇತ್ರದ ಬಗ್ಗೆ ಹೆಚ್ಚು ಗಮನಹರಿಸಿದ್ದು, ಈಗಿನಿಂದಲೇ ಅದಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಆ ಭಾಗದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಪಕ್ಷದ ಮೈಸೂರು ವಿಭಾಗದ ಬಲವರ್ಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವೆಲ್ಲವೂ ಅವರು ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ಎನ್ನಲಾಗಿದೆ.












Click it and Unblock the Notifications