ಅಪ್ರಾಪ್ತೆಯೊಂದಿಗೆ ಪರಾರಿ : ಹಾಸ್ಟೆಲ್ ವಾರ್ಡನ್ ಬಂಧನ

ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದಲ್ಲಿರುವ ಆರ್‌ಎಸ್‌ಜಿಎಂ ವಸತಿ ಶಾಲೆಯಲ್ಲಿ ಓದುತ್ತಿದ್ದ ಹನ್ನೆರಡು ವರ್ಷದ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಅಪಹರಿಸಿದ್ದಾನೆ ಎಂದು ಬಾಲಕಿಯ ಪೋಷಕರು ಜುಲೈ 13ರಂದು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಬಲೆ ಬೀಸಿದ್ದ ಪೊಲೀಸರು, ರಮೇಶನ ಮೊಬೈಲ್ ಕರೆಗಳ ಜಾಡು ಹಿಡಿದು, ಅವರಿಬ್ಬರು ಕೊಲ್ಹಾಪುರದಲ್ಲಿ ಇರುವುದನ್ನು ಪತ್ತೆ ಹಚ್ಚಿದರು. ನಂತರ ದಾಳಿ ನಡೆಸಿ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಇದು ಅಪಹರಣದ ಪ್ರಕರಣ ಎಂಬುದು ಬಾಲಕಿ ಮತ್ತು ರಮೇಶನ ಹೇಳಿಕೆ ಪಡೆದನಂತರ ಸುಳ್ಳು ಎಂದು ತಿಳಿದಿಬಂದಿದೆ. ಓದಲು ಇಷ್ಟವಿಲ್ಲದ ಕಾರಣ ಬಾಲಕಿಯೇ ಬಾಲಕರ ಶಾಲೆಯ ವಾರ್ಡನ್ ಆಗಿದ್ದ ರಮೇಶನೊಂದಿಗೆ ಪರಾರಿಯಾಗಿದ್ದಳು. ಆದರೆ, ಬಾಲಕಿ ಇನ್ನೂ ಪ್ರಾಪ್ತ ವಯಸ್ಸಿಗೆ ಬಂದಿರದ ಕಾರಣ ರಮೇಶನನ್ನು ಬಂಧಿಸಲಾಗಿದೆ.
ರಮೇಶ ಮತ್ತು ಬಾಲಕಿ ಬೆಳಗಾವಿ ಜಿಲ್ಲೆಯ ಹುನ್ನಾಳ ಗ್ರಾಮದವರು. ಬಾಲಕಿಯ ಕುಟುಂಬಸ್ಥರು ಸ್ಥಿತಿವಂತರಾಗಿದ್ದು, ತಂದೆ ಜಮೀನದಾರರಾಗಿದ್ದಾರೆ. ಅವರ ಜಮೀನಿನಲ್ಲಿ ರಮೇಶನ ಅಪ್ಪ ಕೂಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದಲೇ ಇಬ್ಬರ ಪರಿಚಯ ಆರಂಭವಾಗಿದೆ.
ವರೂರು ವಸತಿ ಶಾಲೆಯ ಹಾಸ್ಟೆಲ್ಲಿನಲ್ಲಿದ್ದ ಬಾಲಕಿ ಮತ್ತು ಬಾಲಕರ ವಸತಿ ಶಾಲೆಯ ವಾರ್ಡನ್ ಆಗಿದ್ದ ರಮೇಶನ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಕದ್ದುಮುಚ್ಚಿ ಪ್ರೀತಿಸುತ್ತಿದ್ದರು. ಬಾಲಕಿಗೆ ಓದಲು ಅಂತಹ ಆಸಕ್ತಿಯಿರಲಿಲ್ಲ ಮತ್ತು ಹಾಸ್ಟೆಲ್ ಜೀವನ ಬೇಡವಾಗಿದ್ದರಿಂದ ಇಬ್ಬರೂ ಪರಾರಿಯಾಗಿದ್ದಾರೆ.
ಇದರಲ್ಲಿ ರಮೇಶನ ತಪ್ಪೇನೂ ಇಲ್ಲ. ಇಬ್ಬರೂ ಪ್ರೀತಿಸುತ್ತಿದ್ದೆವು. ಇಬ್ಬರೂ ಸ್ವಇಚ್ಛೆಯಿಂದ ಓಡಿಹೋಗಿ ಮದುವೆ ಆಗಬೇಕೆಂದು ಬಯಸಿದ್ದೆವು. ದಯವಿಟ್ಟು ರಮೇಶನನ್ನು ಜೈಲಿಗೆ ಕಳಿಸಬೇಡಿ ಎಂದು ಬಾಲಕಿ ಪೊಲೀಸರಿಗೆ ಗೋಗರೆದಿದ್ದಾಳೆ. ಬಾಲಕಿ ಅಪ್ರಾಪ್ತೆ ಎಂದು ಗೊತ್ತಿದ್ದರೂ ಆಕೆಯ ಜೊತೆ ಪರಾರಿಯಾಗಿದ್ದು ತಪ್ಪಲ್ಲವಾ ಎಂದು ಪೊಲೀಸರು ಕೇಳುತ್ತಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕೂಡ ಕಳುಹಿಸಲಾಗಿದ್ದು, ಇಬ್ಬರ ನಡುವೆ ಲೈಂಗಿಕ ಸಂಪರ್ಕವೇನಾದರೂ ಸಂಭವಿಸಿತ್ತಾ ಎಂಬುದರ ಪರೀಕ್ಷೆ ನಡೆಸಲಾಗುತ್ತಿದೆ.












Click it and Unblock the Notifications