ಮೇಲುಕೋಟೆ : ಪೊಲೀಸರಿಗೆ ಹೆದರಿದ ಅರ್ಚಕರು ಪರಾರಿ

ವಿಧಾನಸಭೆ ಕಲಾಪದಲ್ಲಿ ದೇವಾಲಯದ ಅವ್ಯವಹಾರ ಪ್ರಕರಣದ ಬಗ್ಗೆ ಚರ್ಚೆ ನಡೆದಿತ್ತು. ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ, ನರಸರಾಜ ಭಟ್ಟರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು.
ಸಚಿವರ ಆದೇಶದಂತೆ ಮಂಡ್ಯ ಜಿಲ್ಲಾಧಿಕಾರಿ ಬಿ.ಎಸ್.ಕೃಷ್ಣಯ್ಯ, ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಮೇಲುಕೋಟೆ ಠಾಣೆಯಲ್ಲಿ ನರಸರಾಜ ಭಟ್ಟ ವಿರುದ್ಧ ದೂರು ದಾಖಲಿಸುವಂತೆ ದೂರು ಸೂಚಿಸಿದ್ದರು. ಬುಧವಾರ ರಾತ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರತಿ ಹಿಡಿದು ನರಸರಾಜ ಭಟ್ಟರನ್ನು ಹುಡುಕಲು ಗುರುವಾರ ಹೊರಟ ಪೊಲೀಸರಿಗೆ ನಿರಾಸೆಯಾಗಿದೆ. ಭಟ್ಟರು ತಮ್ಮ ವಿರುದ್ಧ ದೂರು ದಾಖಲಾಗಿದ್ದು, ತಿಳಿಯುತ್ತಿದ್ದಂತೆಯೇ ಪರಾರಿಯಾಗಿದ್ದಾರೆ.
ಎಸ್ಐ ಅಶೋಕ್ ನೇತೃತ್ವದ ತಂಡ ಗುರುವಾರ ನರಸರಾಜ ಭಟ್ಟರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದರೆ, ಭಟ್ಟರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಅರ್ಚಕರನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಯಾವ ಪ್ರಕರಣ : ನರಸರಾಜ ಭಟ್ಟರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 406 (ನಂಬಿಕೆ ದ್ರೋಹ), 408 (ಕರ್ತವ್ಯದಲ್ಲಿ ವಂಚನೆ), 420 (ಮೋಸ)ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಡಳಿತಾಧಿಕಾರಿ ನೇಮಕಕ್ಕೂ ಚಿಂತನೆ : ದೇವಾಲಯದ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಈ ಕುರಿತು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಈ ಕುರಿತು ಅಂತಿಮ ಆದೇಶ ಪ್ರಕಟವಾಗಿಲ್ಲ. (ದೇವಾಲಯದಲ್ಲಿ ನಡೆದ ಅಪಶಕುನಕ್ಕೆ ಬೆಚ್ಚಿಬಿದ್ದ ಜನತೆ)












Click it and Unblock the Notifications