ಪಾಸ್ ಪೋರ್ಟ್, ಅಡ್ರೆಸ್ ಇಲ್ಲದವನಿಗೆ ನೊಬೆಲ್ ಪ್ರಶಸ್ತಿ?
ಬೆಂಗಳೂರು, ಜು.17: ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ ಎಸ್ ಎ) ಮಾಜಿ ಗುತ್ತಿಗೆದಾರ ಹಾಗೂ ಅದರ ಬೇಹುಗಾರಿಕೆ ರಹಸ್ಯಗಳನ್ನು ಬಯಲುಗೊಳಿಸಿರುವ ಎಡ್ವರ್ಡ್ ಸ್ನೋಡನ್ ಗೆ ರಷ್ಯಾದಲ್ಲೂ ನೆಲೆ ಸಿಗುವ ಸಾಧ್ಯತೆ ಕಮ್ಮಿ ಎನಿಸಿದೆ. ಈ ನಡುವೆ ಸ್ವೀಡನ್ ನ ಪ್ರಾಧ್ಯಾಪಕರೊಬ್ಬರು ಸ್ನೋಡೆನ್ ಹೆಸರ್ನನು 'ನೊಬೆಲ್ ಶಾಂತಿ ಪ್ರಶಸ್ತಿ'ಗೆ ಸೂಚಿಸಿದ್ದಾರೆ.
ವೈಯಕ್ತಿಕ ಪ್ರಾಣಭೀತಿಯನ್ನು ಲೆಕ್ಕಿಸದೆ ದೇಶದಿಂದ ದೇಶಕ್ಕೆ ಆಶ್ರಮ ಬೇಡಿ ತಿರುಗುತ್ತಿರುವ ಸ್ನೋಡೆನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದರೆ ದೊಡ್ಡ ವಿಕ್ರಮವಾಗಲಿದೆ. ಪಾಸ್ ಪೋರ್ಟ್, ಮನೆ ವಿಳಾಸ ಇಲ್ಲದೆ ಮಾಸ್ಕೋದ ಶೆರೆಮೆಟ್ಯೆವೊ(Sheremetyevo) ವಿಮಾನ ನಿಲ್ದಾಣದ ಟರ್ಮಿನಲ್ ಎಫ್ ನಲ್ಲಿ ಕಾಲ ದೂಡುತ್ತಿರುವ ಸ್ನೋಡೆನ್ ಇನ್ನೊಂದು ವಾರದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಅಮೆರಿಕದ ಅಟರ್ನಿ ಜನರಲ್ ಹೇಳಿದ್ದಾರೆ.

ಎನ್ ಎಸ್ ಎಯ ವ್ಯಾಪಕ ಬೇಹುಗಾರಿಕೆ ಕಾರ್ಯಕ್ರಮದ ವಿವರವನ್ನು ಬಯಲುಗೊಳಿಸಿರುವ ಸಾಹಸಕ್ಕಾಗಿ ಎಡ್ವರ್ಡ್ ಸ್ನೋಡನ್ ರಿಗೆ 'ನೊಬೆಲ್ ಶಾಂತಿ ಪ್ರಶಸ್ತಿ' ನೀಡಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಬರೆದ ಪತ್ರದಲ್ಲಿ ಸ್ವೀಡನ್ನಿನ ಉಮಿಯಾ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸ್ಟೀಫನ್ ಸ್ವಾಲ್ ಫೋರ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಡ್ವರ್ಡ್ ಸ್ನೋಡನ್ ರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದಲ್ಲಿ, 2009ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಈ ಪ್ರಶಸ್ತಿಯನ್ನು ಪ್ರಕಟಿಸುವಲ್ಲಿ ಸಮಿತಿಯು ಅವಸರದ ಹಾಗೂ ತಪ್ಪು ನಿರ್ಧಾರ ಕೈಗೊಂಡಿತ್ತು ಎಂಬ ಅಪವಾದದಿಂದ ಹೊರಬರಲು ಸಾಧ್ಯವಾಗಲಿದೆ ಎಂದೂ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯಾಗುವಂತೆ ಎನ್ ಎಸ್ ಎ ನಡೆಸಿರುವ ವ್ಯಾಪಕ ಬೇಹುಗಾರಿಕೆಯ ವಿವರಗಳನ್ನು ಬಯಲುಗೊಳಿಸುವ ಮೂಲಕ ಜಗತ್ತನ್ನು ಜಾಗೃತಗೊಳಿಸುವಲ್ಲಿ ಹಾಗೂ ಕಾಪಾಡುವಲ್ಲಿ ಸ್ನೋಡನ್ ನೆರವಾಗಿದ್ದಾರೆ ಎಂದು ಪತ್ರದಲ್ಲಿ ಪ್ರಾಧ್ಯಾಪಕರು ಬರೆದಿದ್ದಾರೆ.
Edward #Snowden nominated for the Nobel Peace Prize by a sociology professor Stefan Svallfors http://t.co/JioTf1VpZu #NSA #Wikileaks
— The Hacker News™ (@TheHackersNews) July 15, 2013
ಪ್ರಸಕ್ತ ರಷ್ಯಾದಲ್ಲಿ ಸಿಲುಕಿಕೊಂಡಿರುವ ಎಡ್ವರ್ಡ್ ಸ್ನೋಡನ್ ಆ ರಾಷ್ಟ್ರದಲ್ಲೇ ತಾತ್ಕಾಲಿಕ ಆಶ್ರಯಕ್ಕಾಗಿ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. 30 ವರ್ಷ ವಯಸ್ಸಿನ ಸ್ನೋಡನ್ ಗೆ ಆಶ್ರಯ ನೀಡಲು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಾದ ವೆನೆಜುವೆಲ, ಬೊಲಿವಿಯ ಹಾಗೂ ನಿಕಾರಗುವಾ ಮುಂದೆ ಬಂದಿದ್ದವು. ಆದರೆ, ಯುಎಸ್ ವಿಮಾನಯನ ಪ್ರದೇಶ ದಾಟಿ ಹೋಗಲು ಸ್ನೋಡೆನ್ ಗೆ ಸಾಧ್ಯವಾಗಿರಲಿಲ್ಲ. ಹಾಂಗಾಂಕ್ ನಿಂದ ನೇರವಾಗಿ ರಷ್ಯಾಗೆ ಬಂದಿಳಿದು ಆಶ್ರಯಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ.
ಅಮೆರಿಕದಿಂದ ಬೆದರಿಕೆ: ಅಮೆರಿಕದ ಬೇಹುಗಾರಿಕೆ ರಹಸ್ಯಗಳನ್ನು ಸೋರಿಕೆ ಮಾಡಿರುವ ಎನ್‌ಎಸ್‌ಎಯ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡನ್ ರನ್ನು ಅಮೆರಿಕಕ್ಕೆ ಮರಳಿಸದಿದ್ದಲ್ಲಿ ರಷ್ಯಾ ದೀರ್ಘಕಾಲಿಕ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಅಮೆರಿಕ ಮತ್ತೊಮ್ಮೆ ರಷ್ಯಾಕ್ಕೆ ಬಲವಾದ ಎಚ್ಚರಿಕೆ ನೀಡಿದೆ. ಸ್ನೋಡನ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮೆಂದಿಗೆ ಚರ್ಚಿಸಲು ರಷ್ಯಾ ಸರ್ಕಾರಕ್ಕೆ ಇದೊಂದು ಅವಕಾಶವಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನಿ ಹೇಳಿದ್ದಾರೆ.












Click it and Unblock the Notifications