ಸರಕಾರಿ ಜಾಗದಲ್ಲಿ ರಾಕೇಶ್ ಸಿದ್ದರಾಮಯ್ಯಗೆ ಶುಭಾಶಯ
ಬೆಂಗಳೂರು, ಜುಲೈ 13: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಬಗ್ಗೆ ಈಗ ಮತ್ತೊಂದು ವಿವಾದ ಕಾಣಿಸಿಕೊಂಡಿದೆ. ಸರಕಾರಿ ಜಾಹೀರಾತುಗಳಿಗಷ್ಟೇ ಮೀಸಲಾದ, ಸರಕಾರಿ ಜಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಅವರಿಗೆ ಜನ್ಮ ದಿನ ಶುಭಾಶಯ ಹೇಳುವ ಜಾಹೀರಾತು ನಗರದಲ್ಲಿ ರಾರಾಜಿಸುತ್ತಿದೆ.
ಸಿದ್ದರಾಮಯ್ಯ ಅವರು ತಾವು son strokeಗೆ ಗುರಿಯಾಗುವುದಿಲ್ಲ ಎಂದು ಎಷ್ಟೇ ಹೇಳಿದರೂ ಅವರ ಪುತ್ರ ರಾಕೇಶ್ ಜತೆ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ.
ನಿನ್ನೆ ಶುಕ್ರವಾರ ಸಿಎಂ ಸಿದ್ದು ಅತ್ತ ವಿಧಾನಸಭೆಯಲ್ಲಿ ತಮ್ಮ ಕನಸಿನ ಬಜೆಟ್ ಮಂಡಿಸುತ್ತಿದ್ದರೆ ಇತ್ತ ಮುಖ್ಯಮಂತ್ರಿ ಅಧಿಕೃತ ನಿವಾಸದ ಎದುರಿಗೇ ಇರುವ ವಿಂಡ್ಸರ್ ಮ್ಯಾನರ್ ಜಂಕ್ಷನಿನಲ್ಲಿ ವಿವಾದ ಜಾಹೀರಾತೊಂದು ಧುತ್ತನೆ ತಲೆ ಎತ್ತಿದೆ. ಈ ಕುರಿತು 'ಬೆಂಗಳೂರು ಮಿರರ್' ಇಂದು ವರದಿ ಮಾಡಿದೆ.

ದೀಪದ ಕೆಳಗೆ ಕತ್ತಲು
ಏನಪ್ಪಾ ಅಂದರೆ ಇಂದು ಜುಲೈ 13 ರಾಕೇಶ್ ಸಿದ್ದರಾಮಯ್ಯನವರ ಜನ್ಮ ದಿನ. ಹಾಗಾಗಿ ಜನ್ಮ ದಿನ ಶುಭಾಶಯ ಕೋರುವಬ ಜಾಹೀರಾತು ಬ್ಯಾನರ್ ಇಲ್ಲಿ ಕಣ್ಣಿಗೆ ಬಿದ್ದಿದೆ.
ವಾಸ್ತವವಾಗಿ ಸರಕಾರದ ಪ್ರಮುಖ ಯೋಜನೆಗಳು/ಸಾಧನೆಗಳನ್ನು ಪ್ರತಿಬಿಂಬಿಸುವ ಜಾಹೀರಾತುಗಳನ್ನು ಮಾತ್ರವೇ ಇಲ್ಲಿ ಹಾಕಬೇಕು. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಮುಖ್ಯಮಂತ್ರಿ ಮನೆಯ ಎದುರೇ ವಾರ್ತಾ ಇಲಾಖೆಯ ಅಧಿಕಾರಿಗಳು ಪುತ್ರ ರಾಕೇಶ್ ಗೆ ಶುಭಾಶಯ ಕೋರುವ ಮೂಲಕ ಮುಖ್ಯಮಂತ್ರಿಯನ್ನು ಓಲೈಸಲು ಇಂತಹ ಚೀಪ್ ಗಿಮಿಕ್ ಗೆ ಕೈಹಾಕಿದ್ದಾರಾ?

ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದು ಏನು ಹೇಳಿದರು
ಇದೇ ಸಂದರ್ಭದಲ್ಲಿ, ತಮ್ಮ ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದು ಏನು ಹೇಳಿದರು ಎಂಬುದು ಕುತೂಹಲಕಾರಿಯಾಗಿದೆ. ಸರಕಾರದ ಯೋಜನೆಗಳು/ಸಾಧನೆಗಳನ್ನು ಪ್ರತಿಬಿಂಬಿಸಲು/ ಜನರಿಗೆ ತಲುಪಿಸಲು ವಾರ್ತಾ ಇಲಾಖೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು. ವಾರ್ತಾ ಇಲಾಖೆಯಿಂದ ಹೊಸ ಜಾಹೀರಾತು ನೀತಿ ಜಾರಿಗೆ ತರಕಾಗುವುದು ಎಂದು ಹೇಳುತ್ತಿರುವ ಸರಿಹೊತ್ತಿನಲ್ಲೇ ಇತ್ತ ವಾರ್ತಾ ಇಲಾಖೆಯ ಅಧಿಕಾರಿಗಳು ರಾಕೇಶ್ ಜಾಹೀರಾತನ್ನು ನೆಟ್ಟಿದ್ದಾರೆ.

ವಾರ್ತಾ ಸಚಿವ ಸಂತೋಷ್ ಲಾಡ್ ಏನನ್ನುತ್ತಾರೆ
ಅಂದಹಾಗೆ ಈ ಶುಭಾಶಯ ಜಾಹೀರಾತನ್ನು ನೆಟ್ಟಿರುವವರು ರಾಕೇಶ್ ಗೆಳೆಯರು ಮತ್ತು ಹಿತೈಷಿಗಳಂತೆ! ಈ ಅಚಾತುರ್ಯವನ್ನು ವಾರ್ತಾ ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ತಂದಾಗ 'ಓಹ್! ಅದು ಸರಕಾರಕ್ಕೆ ಅದೂ ನನ್ನದೇ ಇಲಾಖೆಗೆ ಸೇರಿದ್ದು ಎಂಬುದು ನನಗೆ ಗೊತ್ತಿಲ್ಲ. ನಾನೂ ಹಲವಾರು ಕಡೆ ರಾಕೇಶ್ ಗೆ ಶುಭಾಶಯ ಕೋರುವ ಜಾಹೀರಾತು ಫಲಕಗಳನ್ನು ನೋಡಿದ್ದೇನೆ. ತಕ್ಷಣ ಇದನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿತ್ತೇನೆ' ಎಂದು ಲಾಡ್ ಕೈತೊಳೆದುಕೊಂಡಿದ್ದಾರೆ.

ಖಾಸಗಿ ವ್ಯಕ್ತಿಗಳಿಗೆ ಕಿಂಚಿತ್ತೂ ಅವಕಾಶವಿಲ್ಲ
ರಾಜ್ಯಾದ್ಯಂತ ವಾರ್ತಾ ಇಲಾಖೆಗೆ ಸೇರಿದ ಇಂತಹ ಸುಮಾರು 2,600 ಬೃಹತ್ ಜಾಹೀರಾತು ಫಲಕಗಳು ಇವೆ. ಆದರೆ ಅವುಗಳನ್ನೆಲ್ಲ ಕಟ್ಟುನಿಟ್ಟಾಗಿ ಸರಕಾರಿ ಸೇವೆಗಾಗಿಯೇ ಬಳಸಿಕೊಳ್ಳಬೇಕು. ಖಾಸಗಿ ವ್ಯಕ್ತಿಗಳಿಗೆ ಆ ಜಾಗವನ್ನು ಬಳಸಿಕೊಳ್ಳಲು ಕಿಂಚಿತ್ತೂ ಅವಕಾಶವಿಲ್ಲ. ಆದರೂ ಈ ಅಕ್ರಮ ಹೇಗೆ ನುಸುಳಿತೋ!?

ಸಿದ್ದು ಜ್ಯೇಷ್ಠ ಪುತ್ರ ರಾಕೇಶ್ ಹೀಗ್ಯಾಕೋ!?
ಗಮನಾರ್ಹವೆಂದರೆ ಸಿಎಂ ಸಿದ್ದು ಅವರ ಕಿರಿಯ ಪುತ್ರ ಯತೀಂದ್ರ ಅವರು ವೃತ್ತಿಯಲ್ಲಿ ಡಾಕ್ಟರು ಆಗಿದ್ದು, ಇಂತಹ ಯಾವುದೇ ವಿವಾದಗಳಿಗೆ ಸಿಲುಕದೆ 'ಮುಖ್ಯಮಂತ್ರಿ ಅಪ್ಪನಿಂದ' ಸುರಕ್ಷಿತ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಜ್ಯೇಷ್ಠ ಪುತ್ರ ರಾಕೇಶ್ ಹೀಗ್ಯಾಕೋ!?












Click it and Unblock the Notifications