'ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಲ'

ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಎತ್ತಿಕಟ್ಟುವುದು ವ್ಯರ್ಥ ಪ್ರಯತ್ನ ಎಂದು ದಿಗ್ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಹುದ್ದೆಗೆ ರಾಹುಲ್ ಅಲ್ಲದಿದ್ದರೆ ಮತ್ತೆ ಯಾರು ಸೂಕ್ತವಾದ ವ್ಯಕ್ತಿ ಎಂಬ ಪ್ರಶ್ನೆಗೆ ಮನಮೋಹನ್ ಸಿಂಗ್ ಅವರು ಮತ್ತೊಮ್ಮೆ ಹುದ್ದೆ ಏರುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ನಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಕಾಂಗ್ರೆಸ್ ನಲ್ಲಿ ಪಿಎಂ ಅಥವಾ ಸಿಎಂ ಅಭ್ಯರ್ಥಿಗಳನ್ನು ಚುನಾವಣೆಗೆ ಮೊದಲು ಘೋಷಿಸುವ ಪರಿಪಾಠವಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಮೋದಿ ಭಯವಿಲ್ಲ: ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮೋದಿ ಅವರನ್ನು ಬಿಜೆಪಿ ತಂದು ಕೂರಿಸುವುದರಿಂದ ನಮಗೇನು ಬಾಧೆ ಇಲ್ಲ. ಅದು ಆ ಪಕ್ಷದ ವೈಯಕ್ತಿಕ ವಿಚಾರ. ರಾಜಕೀಯ ಧೃವೀಕರಣದಲ್ಲಿ ಕಾಂಗ್ರೆಸ್ ನಂಬಿಕೆ ಇರಿಸಿಕೊಂಡಿಲ್ಲ.
ಮೋದಿಗಿಂತ ಆರೆಸ್ಸೆಸ್ ಹಾಗೂ ಬಿಜೆಪಿ ತತ್ತ್ವ, ಸಿದ್ಧಾಂತಗಳು ರಾಜಕೀಯವನ್ನು ಹದಗೆಡಿಸುತ್ತಿದೆ. ಧಾರ್ಮಿಕ ನೆಲೆಯ ಮೇಲೆ ಗಲಭೆ, ದ್ವೇಷದ ರಾಜಕೀಯಕ್ಕೆ ಮುಂದಾಗಿವೆ ಎಂದಿದ್ದಾರೆ.
ಮೊದಲು ನಮಗೆ ಜನರ ತೀರ್ಪು ಸಿಗಲಿ ನಂತರ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಮಾತು. ಸಂಸದೀಯ ಮಂಡಳಿಯಲ್ಲಿ ವಿಷಯ ಚರ್ಚೆ ನಡೆಸಿ ಮೈತ್ರಿ ಪಕ್ಷಗಳ ಒಮ್ಮತದಿಂದ ಅಭ್ಯರ್ಥಿಯನ್ನು ಘೋಷಿಸುತ್ತೇವೆ ಎಂದು ಹೇಳಿದರು.
ಎಡಪಕ್ಷಗಳು ಯುಪಿಎ 1 ಸರ್ಕಾರದ ಜೊತೆ ಚೆನ್ನಾಗೆ ನಡೆದುಕೊಂಡರು. ಅಣ್ವಾಸ್ತ್ರ ಕಾಯ್ದೆ ಕಾರಣದಿಂದ ಎಡಪಕ್ಷಗಳು ದೂರಾಗಿದ್ದು ದುರಂತ. ಇತರೆ ಮಿತ್ರ ಪಕ್ಷಗಳಿಗೆ ಹೋಲಿಸಿದರೆ ಎಡಪಕ್ಷಗಳ ಜೊತೆ ಕಾರ್ಯ ನಿರ್ವಹಣೆ ಸುಲಭವಾಗಿದೆ.
ಎನ್ ಡಿಎ ಮಿತ್ರತ್ವವನ್ನು ತೊರೆದ ಜೆಡಿಯು ಬಗ್ಗೆ ಪ್ರತಿಕ್ರಿಯಿಸದ ದಿಗ್ವಿಜಯ್, ನಿತೀಶ್ ಕುಮಾರ್ ತೆಗೆದುಕೊಂಡ ನಿರ್ಣಯ ನಿಧಾನವಾದರೂ ಸರಿಯಾಗಿದೆ ಎಂದಷ್ಟೇ ಹೇಳಿದರು.
ಕಳೆದ 10 ವರ್ಷಗಳ ಸಾಧನೆ ಮುಂದಿನ 5 ವರ್ಷಗಳ ಅಭಿವೃದ್ಧಿ ಯೋಜನೆಯೊಂದಿಗೆ ಲೋಕಸಭೆ ಚುನಾವಣೆ ಎದುರಿಸಲಿದ್ದೇವೆ. ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗು ಕರ್ನಾಟಕದಲ್ಲಿ ಬಿಜೆಪಿ ಸೋಲು ನಮಗೆ ವರವಾಗಲಿದೆ ಎಂದರು.












Click it and Unblock the Notifications