ಬಜೆಟ್ ಅಧಿವೇಶನಕ್ಕೆ ವಿಧಾನಸೌಧ ಸಜ್ಜು
ಬೆಂಗಳೂರು, ಜು. 11: ರಾಜ್ಯ ಬಜೆಟ್ ಅಧಿವೇಶನ ಜು.12ರ ಮಧ್ಯಾಹ್ನ 12:30ಕ್ಕೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ವಿಧಾನ ಸೌಧದ ಸುತ್ತಮುತ್ತಲಿನ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ತಿಳಿಸಿದ್ದಾರೆ.
ಈ ನಡುವೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಜನಪರ ಬಜೆಟ್ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುತ್ತಿಲ್ಲ. ಅದರೂ ಕೃಷಿ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಉಳಿದಂತೆ ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಇಂಧನ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ.
ಜು.12ರ ಬೆಳಗ್ಗೆ 6ಗಂಟೆಯುಂದ ಜು.19ರ ಮಧ್ಯರಾತ್ರಿ 12ಗಂಟೆಯ ವರೆಗೆ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ನಿಷೇಧಾಜ್ಞೆ ಜಾರಿಮಾಡಲಾಗಿದೆ. ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಸಭೆ ಮತ್ತು ಮೆರವಣಿಗೆ, ಶಸ್ತ್ರ, ದೊಣ್ಣೆ, ಚಾಕು ಮತ್ತಿತರ ಮಾರಕಾಸ್ತ್ರಗಳ ಸಾಗಣೆ, ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ವ್ಯಕ್ತಿಗಳ ಅಥವಾ ಪ್ರತಿಕೃತಿ ಪ್ರದರ್ಶನ, ಪ್ರಚೋದನಕಾರಿ ಬಹಿರಂಗ ಘೋಷಣೆ, ಭಿತ್ತಿಪತ್ರ ಪ್ರದರ್ಶ ನವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆಯುಕ್ತ ರಾಘವೇಂದ್ರ ಔರಾದ್ ಕರ್ ತಿಳಿಸಿದ್ದಾರೆ.
ವಿಧಾನಪರಿಷತ್ ಸಭಾಪತಿ ಹೇಳಿಕೆ: ಪರಿಷತ್ತಿನ 122ನೇ ಅಧಿವೇಶನದ ಮುಂದುವರೆದ ಅಧಿವೇಶನ ಶುಕ್ರವಾರದಿಂದ ಆರಂಭವಾಗಿ ಜುಲೈ 31 ರವರೆಗೆ 14 ದಿನಗಳ ಕಾಲ ನಡೆಯಲಿದೆ ಎಂದರು. ಈ ಬಾರಿ ಕೇವಲ 3 ತಿಂಗಳ ಅಂತರದಲ್ಲಿ ಬಜೆಟ್ ನ ಮಂಡನೆ, ಚರ್ಚೆ, ಅಂಗೀಕಾರ ನಡೆಯಲಿದೆ. ಈಗಾಗಲೇ 171 ಪ್ರಶ್ನೆಗಳು ಸ್ವೀಕೃತವಾಗಿದ್ದು, 608 ಚುಕ್ಕೆ ಗುರುತಿನ ಪ್ರಶ್ನೆಯಾಗಿದ್ದು, 163 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ ಎಂದರು.
62 ಗಮನಸೆಳೆಯುವ ಸೂಚನೆಗಳು ನಿಯಮ 330ರಡಿಯಲ್ಲಿ 44 ಸೂಚನೆಗಳು ಬಂದಿವೆ. ಪಂಚಾಯತ್ ರಾಜ್ ವಿಧೇಯಕ ಹಾಗೂ ರಾಜ್ಯಪಾಲರಿಂದ ಬಂದಿರುವ ಭೂ ಕಂದಾಯ ತಿದ್ದುಪಡಿ ವಿಧೇಯಕ ಜೊತೆಗೆ ಸರ್ಕಾರ ಮಂಡಿಸಲಿರುವ ವಿಧೇಯಕಗಳು ಮಂಡನೆಯಾಗಲಿವೆ ಎಂದು ಹೇಳಿದರು.
ವಾರ್ಷಿಕ 60 ದಿನಗಳ ಕಾಲ ಅಧಿವೇಶನ ನಡೆಸಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಈ ಬಗ್ಗೆ ಕಾಯ್ದೆಯು ಜಾರಿಯಲ್ಲಿದ್ದರೂ, ಒಮ್ಮೆಯೂ 60 ದಿನ ಅಧಿವೇಶನ ನಡೆದ ನಿದರ್ಶನಗಳಿಲ್ಲ. ಜನವರಿಯಲ್ಲಿ ವರ್ಷದ ಮೊದಲ ಅಧಿವೇಶನ, ಮಾರ್ಚ್ ನಲ್ಲಿ ಬಜೆಟ್ ಅಧಿವೇಶನ, ಜುಲೈನಲ್ಲಿ ಮಳೆಗಾಲದ ಅಧಿವೇಶನ, ನವೆಂಬರ್ ನಲ್ಲಿ ಚಳಿಗಾಲದ ಅಧಿವೇಶನ ಕಾಯ್ದೆ ಪ್ರಕಾರ ನಡೆಯಬೇಕಿದೆ ಎಂದು ಅವರು ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಕನಿಷ್ಟ 25 ದಿನಗಳ ಕಾಲ ಅಧಿವೇಶನವನ್ನು ಒಮ್ಮೆ ಅಥವಾ 2 ಬಾರಿ ನಡೆಸಬೇಕೆಂಬ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದರು.
ಗ್ರಂಥಾಲಯ ಸಮಿತಿ ವಿಧಾನಸೌಧದ ಕಟ್ಟಡದ ಬಗ್ಗೆ ಕೃತಿ ರಚನೆ ಮಾಡಿದ್ದು, ಈ ಅಧಿವೇಶನದ ಸಂದರ್ಭದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಶಂಕರಮೂರ್ತಿ ಹೇಳಿದರು.












Click it and Unblock the Notifications