ಇಂಜಿನಿಯರಿಂಗ್, ಮೆಡಿಕಲ್ ಸೀಟು ಇನ್ನಷ್ಟು ಹೆಚ್ಚಳ

ಪ್ರಸಕ್ತ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಸೀಟು ಮ್ಯಾಟ್ರಿಕ್ಸ್ ಗೆ ಈ ಹೆಚ್ಚುವರಿ ಸೀಟುಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೆಇಎ ಪ್ರಕಟಿಸಿದೆ. ಬಿ.ಇ ಕೋರ್ಸು ಗಳಿಗೆ ಅರ್ಹತೆ ಪಡೆದ ವಿದ್ಯಾರ್ಥಿಗಳು ಈ ಸೀಟುಗಳನ್ನು ಆನ್ ಲೈನ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥೆಗಳು ಸುಮಾರು 7415ಕ್ಕೂ ಅಧಿಕ ಬಿಇ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಸೇರಿಸಲು ಒಪ್ಪಿದೆ. ಹೀಗಾಗಿ ಸದ್ಯ ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ 58,637ಕ್ಕೇರಿದೆ.
ಇದರ ಜೊತೆಗೆ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು 2094 ಎಂಬಿಬಿಎಸ್ ಸೀಟುಗಳು ಹೆಚ್ಚುವರಿಯಾಗಿ ಸೀಟು ಮ್ಯಾಟ್ರಿಕ್ಸ್ ಗೆ ಸೇರಿಸಲಾಗಿದೆ. ಕಳೆದ ಶುಕ್ರವಾರ ಸುಮಾರು 416 ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಗೌರ್ನಮೆಂಟ್ ಕೋಟಾಕ್ಕೆ ಸೇರಿಸಲಾಗಿತ್ತು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಹೇಳಿದರು.
ಇ ಪೇಮೆಂಟ್: ಸಾಮಾನ್ಯ ಪ್ರವೇಶ ಪರೀಕ್ಷೆ ರಸೀದಿ ಪಾವತಿಗಾಗಿ ಇಂಡಿಯನ್ ಬ್ಯಾಂಕ್ ನಲ್ಲಿ ಪ್ರತ್ಯೇಕ ಖಾತೆ ಆರಂಭಿಸಲಾಗಿದೆ. ಸೀಟು ಆಯ್ಕೆಮಾಡಿಕೊಂಡ ವಿದ್ಯಾರ್ಥಿ ನೇರವಾಗಿ ತನ್ನ ಅಡ್ಮಿಷನ್ ಶುಲ್ಕವನ್ನು ಈ ಖಾತೆಗೆ ಜಮೆ ಮಾಡಬಹುದು. ಯಾವುದೇ ಡಿಮ್ಯಾಂಡ್ ಡ್ರಾಫ್ಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಚಕ್ರವರ್ತಿ ಮೋಹನ್ ಹೇಳಿದರು.
ಬ್ಯಾಂಕ್ ಖಾತೆಗೆ ನೇರವಾಗಿ ಆನ್ ಲೈನ್ ಮೂಲಕ ಪ್ರವೇಶಾತಿ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಯಾವುದೇ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸಬಹುದಾಗಿದೆ. ಇ ಪೇಮೆಂಟ್ ಬಗ್ಗೆ ಹೆಚ್ಚಿನ ವಿವರಗಳು ಹಾಗೂ ಶುಲ್ಕ ವಿವರಗಳ ಬಗ್ಗೆ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಕ್ರವರ್ತಿ ಮೋಹನ್ ತಿಳಿಸಿದರು.
ಇತ್ತೀಚೆಗೆ 416 ಎಂಬಿಬಿಎಸ್ ಸೀಟುಗಳನ್ನು ಹೆಚ್ಚುವರಿಯಾಗಿ ಸಿಇಟಿ 2013 ಮ್ಯಾಟ್ರಿಕ್ಸ್ ಗೆ ಸೇರಿಸಲಾಗಿತ್ತು. ನಂತರ ಬಿ.ಆರ್ಕ್ ಸೀಟುಗಳ ಸರ್ಕಾರಿ ಕೋಟಾದ ಸಂಖ್ಯೆ 541 ಹಾಗೂ ಬಿ.ಅಗ್ರಿ ಸೀಟುಗಳ ಸಂಖ್ಯೆ 172 ಕ್ಕೇರಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮೇ1 ಬುಧವಾರ ಮತ್ತು ಮೇ 2ರ ಗುರುವಾರ 287 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 1.39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಮೇ 3ರಂದು ಪರೀಕ್ಷೆ ನಡೆಸಲಾಗಿತ್ತು. ಸಾಮಾನ್ಯ ಪ್ರವೇಶ ಪರೀಕ್ಷೆ ಶ್ರೇಯಾಂಕ(Rank) ಆಧಾರದ ಮೇಲೆ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಜೂ.5 ರಿಂದ ಆರಂಭಗೊಂಡಿತ್ತು.












Click it and Unblock the Notifications