ಒಕ್ಕಲಿಗರನ್ನು ನಿರ್ಲಕ್ಷಿಸಬೇಡಿ, ಸಿಎಂಗೆ ಎಚ್ಡಿಕೆ ಎಚ್ಚರಿಕೆ!

ಭಾನುವಾರ ನಗರದ ಪುರಭವನದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟ ಹಮ್ಮಿಕೊಂಡಿದ್ದ ಸಮುದಾಯದ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಒಕ್ಕಲಿಗ ಸಮುದಾಯವನ್ನು ಸಿಎಂ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಒಕ್ಕಲಿಗ ಸಮುದಾಯ ಕಾರಣ. ಆದರೆ ಒಕ್ಕಲಿಗ ಸಮುದಾಯದ ಅಧಿಕಾರಿಗಳು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದರೆ, ಅವರು ಇಚ್ಛಿಸಿದ ಸ್ಥಳ ಬಿಟ್ಟು ದ್ವೇಷ ಮನೋಭಾವದಿಂದ ಬೇರೆಲ್ಲಿಗೋ ವರ್ಗಾವಣೆ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಜಾತಿ ರಾಜಕೀಯ ನಡೆಯುತ್ತಿದೆ ಎಂದು ಕುಮಾರಸ್ವಾಮಿ ದೂರಿದರು. ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ದ್ವೇಷದ ರಾಜಕಾರಣ ಮಾಡಿದರೆ, ಬಿ.ಎಸ್.ಯಡಿಯೂರಪ್ಪ ಅವರ ಸ್ಥಿತಿ ನಿಮಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ತಾರತಮ್ಯ ಸಹಿಸೋಲ್ಲ : ನಾನು ಸಿಎಂ ಆಗಿದ್ದಾಗ, ಕುರುಬ ಸಮಾಜದವರಿಗೂ ಸಾಕಷ್ಟು ಸಹಾಯ ಮಾಡಿದ್ದೇನೆ. ಯಾವುದೇ ಸಮುದಾಯದವರಿಗೂ ಅನ್ಯಾಯ ಮಾಡಿಲ್ಲ. ಸಮಾಜದಲ್ಲಿ ಜಾತಿ ಮುಖ್ಯವಲ್ಲ. ಅಧಿಕಾರ ಶಾಶ್ವತವೂ ಅಲ್ಲ.
ದ್ವೇಷದ ರಾಜಕಾರಣ ಮಾಡುತ್ತಾ, ನಮ್ಮ ಸಮಾಜಕ್ಕೆ ತೊಂದರೆ ಮಾಡಿದರೆ ಸಹಿಸುವುದಿಲ್ಲ. ಅವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆಯಲು ಮಾಜಿ ಪ್ರಧಾನಿ ದೇವೇಗೌಡರು ಸಾಕಷ್ಟು ಶಕ್ತಿ ನೀಡಿದ್ದಾರೆ. ಅದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಡಿಕೆಶಿ ಸಂಪುಟದಲ್ಲಿ ಇರಬೇಕಿತ್ತು : ಕುಮಾರಸ್ವಾಮಿ ತಮ್ಮ ರಾಜಕೀಯ ಕಡುವೈರಿ ಶಾಸಕ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ದೊರೆಯಬೇಕಾಗಿತ್ತು ಎಂದು ಹೇಳಿ ಅಚ್ಚರಿ ಮೂಡಿಸಿದರು.
ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸೇರಿದ್ದರೆ, ಒಕ್ಕಲಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯುತ್ತಿದ್ದರು. ಒಕ್ಕಲಿಗೆ ಪ್ರಾತಿನಿಧ್ಯ ನೀಡಬಾರದು ಎಂದು ಸಿದ್ದರಾಮಯ್ಯ ಸಂಪುಟದಿಂದ ಅವರನ್ನು ದೂರವಿಟ್ಟಿದ್ದಾರೆ ಎಂದರು.
ಸಂಸದ ಅನಂತ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ವಿಧಾನಪರಿಷತ್ ಉಪ ಸಭಾಪತಿ ವಿಮಲಾಗೌಡ, ಕಾಂಗ್ರೆಸ್‌ನ ಯುವ ಮುಖಂಡ ಚೇತನ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪ್ರೊ.ಎಂ. ನಾಗರಾಜು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications