ಲೋಕಸಭೆ ಚುನಾವಣೆಗೆ ಕಹಳೆ ಊದಿದ ಬಿಜೆಪಿ!
ನವದೆಹಲಿ, ಜು.8 : "ನಾವು ಯಾವುದೇ ಸಮಯದಲ್ಲಿ ಚುನಾವಣೆ ಎದುರಿಸಲು ಸಿದ್ದವಾಗಿದ್ದೇವೆ. ಯುಪಿಎ ದುರಾಡಳಿತದಿಂದ ಬೇಸತ್ತಿರುವ ಜನರು ನಮಗೆ ಮತ ನೀಡುತ್ತಾರೆ ಎಂದು ಬಿಜೆಪಿ ಘೋಷಿಸಿದೆ". ಸೋಮವಾರ ನಡೆದ ಸಂಸದೀಯ ಮಂಡಳಿ ಸಭೆಯ ಬಳಿಕ ಬಿಜೆಪಿ ಈ ಘೋಷಣೆ ಮಾಡಿದೆ.
ಸಂಸದೀಯ ಮಂಡಳಿ ಸಭೆಯ ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಲೋಕಸಭೆ ಚುನಾವಣೆಗಾಗಿ ವಿವಿಧ ಸಮಿತಿಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಹೇಳಿದರು.
ಯುಪಿಎ ಸರ್ಕಾರದ ದುರಾಡಳಿತವನ್ನು ಜನರಿಗೆ ತಲುಪಿಸುವುದು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಮುಂತಾದವುಗಳೇ ಬಿಜೆಪಿಯ ಚುನಾವಣಾ ಪ್ರಚಾರದ ಅಂಶಗಳಾಗಿವೆ ಎಂದರು.

ಯುಪಿಎಯಲ್ಲಿ ಬಿರುಕು : ಯುಪಿಎ ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿದೆ. ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದೆ. ಆದ್ದರಿಂದ ಸಂಸತ್ ಅಧಿವೇಶನ ಕರೆಯುತ್ತಿಲ್ಲ. ಜನರು ಮತ್ತು ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯ ಸರ್ಕಾರಕ್ಕೆ ಇಲ್ಲ ಎಂದು ಅನಂತ್ ಕುಮಾರ್ ಲೇವಡಿ ಮಾಡಿದರು.
ಸಂಸದೀಯ ಮಂಡಳಿ ಸಭೆಯಲ್ಲಿ ದೇಶದ ರಾಜಕೀಯ ಚಿತ್ರಣದ ಬಗ್ಗೆ ಚರ್ಚಿಸಲಾಗಿದೆ. ಲೋಕಸಭೆ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದ್ದು, ಯಾವುದೇ ಸಮಯಲ್ಲಿ ಚುನಾವಣೆ ಎದುರಾದರೂ ಬಿಜೆಪಿ ಸಿದ್ದವಾಗಿದೆ ಎಂದು ತಿಳಿಸಿದರು.
ಪಕ್ಷದ ನೇತೃತ್ವದಲ್ಲಿ ಸಮಾವೇಶ, ಸಭೆ ಮುಂತಾದವುಗಳನ್ನು ನಡೆಸಿ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ರಾಜ್ಯಗಳಲ್ಲೂ ಪಕ್ಷದ ಸಂಘಟನೆಯನ್ನು ಬಲಪಡಿಸಿ, ಪ್ರಚಾರ ಕಾರ್ಯ ನಡೆಸಲು ಸಭೆಯಲ್ಲಿ ತಂತ್ರ ರೂಪಿಸಲಾಯಿತು ಎಂದು ಮಾಹಿತಿ ನೀಡಿದರು.
ಯುಪಿಎ ಚಾರ್ಚ್ ಶೀಟ್ : ಪಕ್ಷದ ಪ್ರಣಾಳಿಕೆ ರಚನೆಗಾಗಿ ವಿಶೇಷ ಸಮಿತಿ ರಚಿಸಲಾಗುವುದು. ಯುಪಿಎ ಸರ್ಕಾರದ ಭ್ರಷ್ಟಾಚಾರಗಳನ್ನು ಸಾರುವ ಚಾರ್ಚ್ ಶೀಟ್ ಎಂಬ ವಿಶೇಷ ಪುಸ್ತಕವನ್ನು ಜನರಿಗೆ ಪ್ರಚಾರದ ವೇಳೆ ನೀಡಲಾಗುತ್ತದೆ. ಪಕ್ಷ ಕೆಲವೇ ದಿನಗಳಲ್ಲಿ ಚುನಾವಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಿದೆ ಎಂದರು.
ಉತ್ತಮ ಆಡಳಿತ, ಅಭಿವೃದ್ದಿ : ಬಿಜೆಪಿ ಚುನಾವಣಾ ಪ್ರಚಾರದ ಘೋಷಣೆಯಾಗಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಎಂಬ ಘೋಷಣೆಯನ್ನು ಹೊರತರಲಿದೆ. ಯುಪಿಎ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಆಡಳಿತ ವೈಫಲ್ಯವೇ ಚುನಾವಣಾ ಪ್ರಚಾರದ ಅಸ್ತ್ರವಾಗಿದೆ ಎಂದು ಹೇಳಿದರು.












Click it and Unblock the Notifications