ಬೆಂಗಳೂರು ಪ್ರಾಣಿ ಚಿತಾಗಾರ, ದೇಶದಲ್ಲೇ ಪ್ರಥಮ
ಬೆಂಗಳೂರು, ಜು 7: ಮನುಷ್ಯನಂತೆ ಪ್ರಾಣಿಗಳಿಗೂ ಇನ್ನು ಮುಂದೆ ರಾಜಧಾನಿಯಲ್ಲಿ ಶವಸಂಸ್ಕಾರ ನಡೆಯಲಿದೆ. ದೇಶದಲ್ಲೇ ಮೊದಲು ಎನ್ನಲಾದ ಪ್ರಾಣಿಗಳ ಚಿತಾಗಾರಕ್ಕೆ ಶಂಕುಸ್ಥಾಪನೆ ನೆರವೇರಿದೆ.
ಹಾಗಾಗಿ ಇನ್ನು ಮುಂದೆ ಎಲ್ಲೆಂದರಲ್ಲಿ ಸತ್ತ ಪ್ರಾಣಿಗಳನ್ನು ಹೂಳುವಂತಿಲ್ಲ, ಸುಡುವುದಾಗಲಿ ಅಥವಾ ಎಸೆಯುವಂತಿಲ್ಲ. ಮನುಷ್ಯನಂತೆ ಪ್ರಾಣಿಗಳಿಗೂ ಅಂತ್ಯಕ್ರಿಯೆ ನಡೆಸಲು 'ಪ್ರಾಣಿ ಚಿತಾಗಾರ' ಇನ್ನೊಂದು ವರ್ಷದಲ್ಲಿ ತಲೆ ಎತ್ತಲಿದೆ.

ನಗರದ ಮಾಗಡಿ ರಸ್ತೆಯಲ್ಲಿನ ಸುಮನಹಳ್ಳಿ ಭಿಕ್ಷುಕರ ಕಾಲೋನಿಯ ಮಾನವ ಚಿತಾಗಾರದ ಪಕ್ಕದಲ್ಲಿ ಪ್ರಾಣಿ ಚಿತಾಗಾರಕ್ಕೆ ಶಂಕುಸ್ಥಾಪನೆ ಈಗಾಗಲೇ ನೆರವೇರಿದೆ. ಎರಡುವರೆ ಕೋಟಿ ಬಜೆಟಿನಲ್ಲಿ ಇದನ್ನು ನಿರ್ಮಿಸಲು ಬಿಬಿಎಂಪಿ ಉದ್ದೇಶಿಸಿದೆ.
ಇದು ಸುಸಜ್ಜಿತ ಚಿತಾಗಾರವಾಗಲಿದ್ದು, ಇಲ್ಲಿ ವೈದ್ಯರ ಕೊಠದಿ, ಸ್ಟೋರ್ ರೂಂ, ಭದ್ರತಾ ಸಿಬ್ಬಂದಿ, ಚಿಕ್ಕ ಮತ್ತು ದೊಡ್ಡ ಪ್ರಾಣಿಗಳನ್ನು ಸುಡಲು ಪ್ರತ್ಯೇಕ ವ್ಯವಸ್ಥೆ ಇರುತ್ತದೆ.
ಈ ಹಿಂದೆ 2008ರಲ್ಲಿ ದಿನಕರನ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಸತ್ತ ಪ್ರಾಣಿಗಳನ್ನು ವಿಲೇವಾರಿ ಮಾಡಲು ಚಿತಾಗಾರ ನಿರ್ಮಿಸಲು ಸೂಕ್ತ ಸ್ಥಳ ನಿಗದಿ ಪಡಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು.
ಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಬಿಬಿಎಂಪಿ ಪ್ರಾಣಿ ಚಿತಾಗಾರ ನಿರ್ಮಿಸುವ ಬಗ್ಗೆ ಮುಚ್ಚಳಿಕೆಯನ್ನೂ ನೀಡಿತ್ತು. ಐದು ವರ್ಷಗಳ ಬಳಿಕ ಇದು ಕಾರ್ಯರೂಪಕ್ಕೆ ಬರುತ್ತಿದೆ.












Click it and Unblock the Notifications