ಬಸ್ ದರ ಏರಿಕೆ ವಿರೋಧಿಸಿ ಲೋಕಸತ್ತಾ ಪ್ರತಿಭಟನೆ
ಬೆಂಗಳೂರು, ಜು. 6 : ಬೃಹತ್ ಬೆಂಗಳೂರು ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕೆಎಸ್‌ಆರ್‌ಟಿಸಿ ಬಸ್ ದರ ಏರಿಸಿರುವುದನ್ನು ವಿರೋಧಿಸಿ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಮುಂದೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಲೋಕಸತ್ತಾ ಪಕ್ಷ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರ ಅಂತಹ ಭಾರಿ ಏರಿಕೆ ಆಗಿರದಿದ್ದರೂ, ಬಸ್ ದರ ಏರಿಕೆ ತೀವ್ರವಾಗಿ ಏರಿಸಿರುವುದು ಜನತೆಗೆ ಮಾಡಿದ ಅನ್ಯಾಯ ಮತ್ತು ಇಷ್ಟೂ ದಿನ ಲಾಭದಲ್ಲಿದ್ದ ಬಿಎಂಟಿಸಿ ಏಕಾಏಕಿ 147 ಕೋಟಿ ರು. ನಷ್ಟಕ್ಕೆ ಇಳಿದಿರುವುದು, ಸಂಸ್ಥೆಯಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಲೋಕಸತ್ತಾ ಆರೋಪಿಸಿದೆ.

ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ರವಿ ಕೃಷ್ಣಾ ರೆಡ್ಡಿಯವರು ಹೇಳಿದರು. BMTC ಮತ್ತು KSRTC ಸಂಸ್ಥೆಗಳು ಸಾರ್ವಜನಿಕ ಸಂಸ್ಥೆಗಳಾಗಿದ್ದು, ಇವು ಜನರ ಸೇವೆಗಾಗಿ ಇವೆಯೆ ಹೊರತು ಲಾಭ ಮತ್ತು ಸುಲಿಗೆ ಮಾಡಲು ಅಲ್ಲ ಎಂದೂ ಅವರು ಹೇಳಿದರು.
ಶುಕ್ರವಾರ ಇಳಿಸಿರುವ 1 ರು. ಇಳಿಕೆ (ಮೊದಲನೇ ಸ್ಟೇಜಿಗೆ ಮಾತ್ರ ಅನ್ವಯ) ಕೇವಲ ಕಣ್ಣೀರೊರೆಸುವ ತಂತ್ರವಾಗಿದ್ದು, ಇದರಿಂದ ಯಾರಿಗೂ ಲಾಭವಿಲ್ಲ. ಪ್ರಸ್ತುತ ಹೆಚ್ಚಿಸಿರುವ ಬಸ್ ದರ ಏರಿಕೆಯನ್ನು ತಕ್ಷಣದಿಂದಲೇ ವಾಪಸ್ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸುವಂತಾಗಲು ರಾಜ್ಯ ಸರ್ಕಾರ, ಇವುಗಳಿಗೆ ಅನುದಾನ ನೀಡಬೇಕೆಂದು ಕೋರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಎಂಟಿಸಿಯ ಅಧಿಕಾರಿ ನಾಗೇಂದ್ರ ಅವರ ಮೂಲಕ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಡಾ. ಮೀನಾಕ್ಷಿ ಭರತ್, ಶಾಂತಲಾ ದಾಮ್ಲೆ ಮುಂತಾದವರು ಭಾಗವಹಿಸಿದ್ದರು.












Click it and Unblock the Notifications