ಮಥುರಾ ಸ್ಫೋಟ, ವಿಎಚ್ ಪಿ ಮುಖಂಡ ಸೆರೆ

ಆರೋಪಿ ಅನಂತ್ ನನ್ನು ಭಾನುವಾರ ಬಂಧಿಸಿರುವುದನ್ನು ಮಥುರಾದ ಹಿರಿಯ ಪೊಲೀಸ್ ಅಧೀಕ್ಷಕ ಆರ್.ಕೆ.ಎಸ್.ರಾಥೋರ್ ದೃಢೀಕರಿಸಿದ್ದರು. ಮೇ 30ರಂದು ನಡೆದ ಈ ಸರಣಿ ಸ್ಫೋಟದ ಘಟನೆ ಬಳಿಕ ಮಥುರಾದಲ್ಲಿ ಕೋಮು ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿತ್ತು.
ಆದರೆ, ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರು ಸಫಲರಾಗಿದ್ದರು. ಸ್ಫೋಟಗಳು ಲಘು ಸ್ವರೂಪದ್ದಾಗಿದ್ದವು, ಆದರೆ, ಮುಂದಿನ ಯೋಜನೆಗಳಿಗೆ ಮೆಟ್ಟಿಲಾಗುವ ಸಾಧ್ಯತೆಯಿತ್ತು ಎಂದು ಪೊಲೀಸ್ ಅಧಿಕಾರಿ ರಾಥೋರ್ ಹೇಳಿದ್ದಾರೆ.
ಆ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಅವ್ಯವಸ್ಥೆಯನ್ನು ಪ್ರತಿಭಟಿಸಲು ಅನಂತ್ ಈ ದುಷ್ಕೃತ್ಯಕ್ಕೆ ಕೈಹಾಕಿದ್ದರು. ಆದರೆ ಸ್ಥಳೀಯ ಜನರನ್ನು ಭಯಭೀತಗೊಳಿಸುವ ಉದ್ದೇಶದಿಂದ ಸಂಘ ಪರಿವಾರವು ಈ ಕೃತ್ಯವನ್ನು ಎಸಗಿದೆ ಎಂದು ಸ್ಥಳೀಯ ಮುಸ್ಲಿಂ ನಾಯಕರು ಆಪಾದಿಸಿದ್ದರು. ಕಳೆದ ವರ್ಷದ ಜೂನ್ ನಲ್ಲಿ ಕೋಸಿಕಲಾನ್ ನಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಿದ್ದರು.
ಕಳೆದ ವರ್ಷ ಕೋಸಿಕಲಾನ್ ಪ್ರದೇಶದ ಧಾರ್ಮಿಕ ಸ್ಥಳವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಬರುವವರಿಗಾಗಿ ಇರಿಸಲಾಗಿದ್ದ ನೀರಿನಲ್ಲಿ ಯುವಕನೊಬ್ಬ ಕೈತೊಳೆದ ಘಟನೆಯ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು.
ಆದರೆ ಮಥುರಾ ಸ್ಫೋಟದಲ್ಲಿ ವಿಎಚ್‌ಪಿ ನಾಯಕನ ಪಾತ್ರವಿರುವುದನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದು, ಮುಸ್ಲಿಮರ ಓಲೈಕೆಗಾಗಿ ಅಖಿಲೇಶ್ ಯಾದವ್ ಸರ್ಕಾರ ನಡೆಸಿದ ಸಂಚು ಇದೆಂದು ಅವರು ದೂರಿದ್ದಾರೆ.ವಿಎಚ್ ಪಿ, ಬಿಜೆಪಿ ಹಾಗೂ ಬಜರಂಗದಳದ ಕೆಲವು ಕಾರ್ಯಕರ್ತರು ಜಗದೀಶ್ ಅನಂತ್ ಬಂಧನದ ವಿರುದ್ಧ ಭಾನುವಾರ, ಸೋಮವಾರ ಮಥುರಾದಲ್ಲಿ ಪ್ರತಿಭಟನೆ ನಡೆಸಲಾಗಿದೆ.












Click it and Unblock the Notifications