ಪ್ರಳಯ : ಮೋದಿ ಹೇಳಿಕೆ ಖಂಡಿಸಿದ ಶಿವಸೇನೆ
ಮುಂಬೈ, ಜೂ.25: ಕಾಂಗ್ರೆಸ್ ನಂತರ ಬಿಜೆಪಿ ಹಾಗೂ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಈಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಉತ್ತರಾಖಂಡ್ ನಲ್ಲಿನ ಜಲಪ್ರಳಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ಜನಪ್ರತಿನಿಧಿಗಳ ವಿರುದ್ಧ ಶಿವಸೇನೆ ತನ್ನ ಮುಖವಾಣಿಯಲ್ಲಿ ತೀವ್ರವಾಗಿ ಟೀಕಿಸಿದೆ.
ಉತ್ತರಾಖಂಡ್ ನ ವಿವಿಧ ಯಾತ್ರಾ ಸ್ಥಳಗಳಲ್ಲಿ ಜಲಪ್ರಳಯದಿಂದ ಸಿಲುಕಿರುವ ಸುಮಾರು 15,000ಕ್ಕೂ ಅಧಿಕ ಗುಜರಾತಿಗಳನ್ನು ಸಂರಕ್ಷಿಸಲಾಗಿದೆ ಎಂದು ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆ ಈಗ ವಿವಾದ ಕೇಂದ್ರ ಬಿಂದುವಾಗಿದೆ.
ಯಾವುದೇ ಪ್ರಚಾರದ ಅಗತ್ಯವಿಲ್ಲದೆ, ಹವಾಮಾನ ವೈಪರೀತ್ಯದ ಜೊತೆ ಬಡಿದಾಡುತ್ತಾ ಸಂತ್ರಸ್ತರ ಬಳಿಗೆ ವಿಮಾನ ಸಾಗಿಸುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಭಾರತೀಯ ಸೇನೆ ಇದೆ. ಅದರೆ, ಮೋದಿ ಅವರು 15 ಸಾವಿರ 'ಗುಜರಾತಿ' ಗಳನ್ನು ಸುರಕ್ಷಿತ ನೆಲೆಗೆ ತಲುಪಿಸಲಾಗಿದೆ ಎಂದಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ನಂತರ ಶಿವಸೇನೆ ಎತ್ತಿದೆ.

ಬಿಜೆಪಿಯ ಅಘೋಷಿತ ಪ್ರಧಾನಿ ಅಭ್ಯರ್ಥಿಯಾಗಿರುವ ಮೋದಿ ಅವರು ಕೇವಲ ಗುಜರಾತ್ ರಾಜ್ಯದ ಸಂತ್ರಸ್ತರ ಬಗ್ಗೆ ಕಾಳಜಿ ತೋರಿಸಿ ಹೇಳಿಕೆ ನೀಡಿರುವುದು ಖಂಡನೀಯ. ಮೋದಿ ಆವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ಉನ್ನತ ದರ್ಜೆಗೇರಿಸಿದ ಮೇಲೆ ಅವರು ರಾಷ್ಟ್ರಮಟ್ಟದ ನಾಯಕರಾಗುತ್ತಾರೆ. ಆದರೆ, ಕೇವಲ ಒಂದು ರಾಜ್ಯಕ್ಕೆ ಸೀಮಿತವಾದ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.
ನರೇಂದ್ರ ಮೋದಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರೆ ನಂಬಲು ಕಷ್ಟ. ಆದರೆ, ಒಂದು ವೇಳೆ ಅವರು ಈ ರೀತಿ ಹೇಳಿಕೆ ನೀಡಿದ್ದರೆ ಅದು ದುರಂತ. ಮೋದಿ ಹೇಳಿಕೆ ಬಗ್ಗೆ ಈಗಾಗಲೇ ಎಲ್ಲೆಡೆ ಪ್ರಚಾರ ಸಿಕ್ಕಿದೆ. ಮಾಧ್ಯಮಗಳಲ್ಲಿ ಇದೇ ಮುಖ್ಯ ಚರ್ಚೆಯಾಗುತ್ತಿದೆ. ಮೋದಿ ಅವರಂತೆ ಅನೇಕ ನಾಯಕರು 'ವಿಪತ್ತು ನಿರ್ವಹಣೆ ಪ್ರವಾಸ' ಕೈಗೊಳ್ಳುತ್ತಿದ್ದಾರೆ ಇದರಿಂದ ಎಷ್ಟು ಪ್ರಯೋಜನ ಗೊತ್ತಿಲ್ಲ.
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌವಾಣ್ ಅವರು ಡೆಹ್ರಾಡೂನ್ ಗೆ ಭೇಟಿ ನೀಡಿದ ಬಗ್ಗೆ ತೃಪ್ತಿ ಇದೆ. ಆದರೆ, ಅನಗತ್ಯವಾಗಿ ರಾಜಕೀಯ ಮುಖಂಡರು ವಿಪತ್ತು ಸಂಭವಿಸಿರುವ ತಾಣಗಳಿಗೆ ಭೇಟಿ ನೀಡುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ ಹಾಗೂ ಪರಿಹಾರ ಕಾರ್ಯ ವಿಳಂಬವಾಗುತ್ತದೆ.
When @narendramodi visits #Uttarakhand #paidmedia report he is hampering rescue operations, but if Rahul Gandhi visits #paidmedia sleeps.
— Happens In India (@happensinindia) June 25, 2013
ಈ ನಡುವೆ ಉತ್ತರಾಖಂಡ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ವಿಶೇಷ ಸೂಚನೆ ನೀಡಿದೆ. ಬೇರೆ ರಾಜ್ಯದ ಪ್ರತಿನಿಧಿಗಳು ತಮ್ಮದೇ ಆದ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗದಿರುವಂತೆ ಸೂಚಿಸಿದೆ. ಕಳೆದ ವಾರಾಂತ್ಯದಲ್ಲಿ ನರೇಂದ್ರ ಮೋದಿ ಅವರು ಉತ್ತರಾಖಂಡ್ ರಾಜ್ಯದ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮೇಲೆ ಈ ಸೂಚನೆ ಹೊರ ಬಿದ್ದಿರುವುದು ವಿಶೇಷ.
ಸಂತ್ರಸ್ತರ ಸಹಾಯಕ್ಕಾಗಿ ಡೆಹ್ರಾಡೂನ್ ನಿಂದ ಅಹಮದಾಬಾದಿಗೆ ವಿಶೇಷ ವಿಮಾನ ವ್ಯವಸ್ಥೆ ಬಗ್ಗೆ ಮೋದಿ ಮಾತನಾಡಿದ್ದರು. ವಿವಿಧ ರಾಜ್ಯಗಳಿಂದ ಪರಿಹಾರ ನಿಧಿ ಹರಿದು ಬರುತ್ತಲೇ ಇದೆ. ಉತ್ತರಾಖಂಡ್ ಪಕ್ಕದ ರಾಜ್ಯ ಉತ್ತರ ಪ್ರದೇಶದಿಂದ 25 ಕೋಟಿ ರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ, ಹರ್ಯಾಣದಿಂದ ತಲಾ 10 ಕೋಟಿ ರು, ರಾಜಸ್ಥಾನದಿಂದ 2 ಕೋಟಿ, ಕರ್ನಾಟಕ, ಬಿಹಾರ ಹಾಗೂ ಒಡಿಶಾ ರಾಜ್ಯದಿಂದ ತಲಾ 5 ಕೋಟಿ ರು ನೀಡಲಾಗಿದೆ.












Click it and Unblock the Notifications