ಎಲ್ಲಾ ದೇವರ ದಯೆ- ಅರ್ಚಕರಿಗೆ ಸೂಪರ್ ಬಂಪರ್!
ಬೆಂಗಳೂರು, ಜೂನ್ 21: ಎಲ್ಲಾ ದೇವರ ದಯೆ! ಸಿಎಂ ಸಿದ್ದರಾಮಯ್ಯ ಅವರ ಸರಕಾರ ಅರ್ಚಕರತ್ತ ದೃಷ್ಟಿಹರಿಸಿದ್ದು ಅವರ ಪುರಾತನ ಬೇಡಿಕೆಗಳಿಗೆ ತಥಾಸ್ತು ಅಂದಿದ್ದಾರೆ. ಇದರಿಂದ ಅರ್ಚಕರ ಬದುಕು ಬಂಗಾರವಾಗಲಿದೆ.
ಏನಪ್ಪಾ ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಪಡೆದು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಅವರು ಸರಕಾರದ ಅಧೀನಕ್ಕೆ ಬರುವ ದೇಗುಲಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಭಾರಿ ಸಂಬಳ, ಸವಲತ್ತುಗಳನ್ನು ಕೊಡುಗೈ ದಾನಿಯಾಗಿ ನೀಡಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎಂಬುದು ಈ ಪೂಜಾರಿ ಅರ್ಚರಕರಿಗೇ ತಿರುಗುಬಾಣವಾಗಿತ್ತು. ಭಕ್ತರು ಒಂದಷ್ಟು ತಟ್ಟೆ ಕಾಸು ಹಾಕುವುದರಲ್ಲೇ ಜೀವನ ಕಟ್ಟಿಕೊಳ್ಳುತ್ತಿದ್ದರೂ ಸರಕಾರವು ದೇವರ ರೂಪದಲ್ಲಿ ಬಂದು ಒಂದಷ್ಟು ಉತ್ತಮ ಸಂಬಳ ಅಂತ ತಥಾಸ್ತು ಅಂದಿರಲಿಲ್ಲ. ಆದರೆ ಈಗ ಸಿದ್ದರಾಮಯ್ಯ-ಹುಕ್ಕೇರಿ ಜೋಡಿ ಮನಸು ಮಾಡಿರುವುದರಿಂದ ಅರ್ಚಕರಿಗೆ ಬಂಪರ್ ಕೊಡುಗೆ ದೊರಕಲಿದೆ.

ಬಿಜೆಪಿ ಸರಕಾರದ ಕೊನೆಗಾಲದಲ್ಲಿ
ಈ ಹಿಂದಿನ ಬಿಜೆಪಿ ಸರಕಾರ ತನ್ನ ಕೊನೆಗಾಲದಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆಷದರೆ ಚುನಾವಣೆ ಘೋಷಣೆಯಾಗಿ ಅದನ್ನು ಜಾರಿಗೆ ತಾರದೆ ಹಾಗೇ ಮನೆ ಸೇರಿಕೊಂಡಿತು. ಆದರೆ ಹಾಲಿ ಕಾಂಗ್ರೆಸ್ ಸರಕಾರ ಬಿಜೆಪಿ ನಿರ್ಣಯಗಳಿಗೆ ಮನ್ನಣೆ ನೀಡಿದ್ದು, ಬೆಲೆಯೇರಿಕೆಯಿಂದ ಅರ್ಚಕರ ಜೀವನ ದುಸ್ತರಗೊಂಡಿದೆ. ಹಾಗಾಗಿ ಅವರ ಬದುಕುಗಳನ್ನು ಹಸನು ಮಾಡಲು ಸಂಬಳಗಳನ್ನು ಏರಿಸುತ್ತಿದೆ.

ಅರ್ಚಕರ ಮಾಸಿಕ ತಸ್ತಿಕ್ ಮೊತ್ತ (tasdik) ಹೆಚ್ಚಳ
ಏನಪ್ಪಾ ಮೊದಲ ಏಟಿಗೆ ರಾಜ್ಯ ಸರ್ಕಾರವು ಮುಜರಾಯಿ ದೇವಾಲಯಗಳ ಅರ್ಚಕರ ಮಾಸಿಕ ತಸ್ತಿಕ್ ಮೊತ್ತವನ್ನು (tasdik) ಎರಡು ಸಾವಿರ ರೂ. ಗೆ ಹೆಚ್ಚಳ ಮಾಡಲಿದೆ. ಈ ಹಿಂದೆ ಕೇವಲ 1,000 ನೀಡಲಾಗುತ್ತಿತ್ತು ಎಂದು ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಗುರುವಾರ ದೇವರ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ಆದರೆ ಇದೆಲ್ಲಾ ಜುಲೈ 12ರಂದು ಸಿಎಂ ಸಿದ್ದು ಮಂಡಿಸಲಿರುವ ನೂತನ ಬಜೆಟ್‌ನಲ್ಲಿ ಅಂಗೀಕಾರ ಪಡೆದು, ಕಾರ್ಯರೂಪಕ್ಕೆ ಬರಲಿದೆ.

ಪೂಜಾ ವಸ್ತು ಖರೀದಿಗೂ ಎತ್ತಿದ ಕೈ
ರಾಜ್ಯದಲ್ಲಿ ಸುಮಾರು 26,988 ಮುಜರಾಯಿ ದೇವಾಲಯಗಳಿವೆ. ಈ ಎಲ್ಲ ದೇವಾಲಯಗಳಲ್ಲಿ ಪೂಜಾ ಕಾರ್ಯ ನಡೆಸಲು ಅಗತ್ಯ ವಸ್ತು ಖರೀದಿಗಾಗಿ ರಾಜ್ಯ ಸರ್ಕಾರವು ಮಾಸಿಕ 1,000 ರೂ. ನಂತೆ ವರ್ಷಕ್ಕೆ 12,000 ರೂ. ಗಳನ್ನು ಅರ್ಚಕರಿಗೆ ನೀಡುತ್ತಿತ್ತು. ಅದು ಬಜೆಟ್ ನಂತರ 24,000 ರೂ. ಆಗಲಿದೆ ಎಂದು ತಿಳಿಸಿದರು.

Aradhana scheme
ಇಷ್ಟೇ ಅಲ್ಲ ದೇವರು ಇನ್ನೂ ಇದೆ. ಆರಾಧಾನ ಯೋಜನೆ ಅಡಿಯಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ದೇವಾಲಯಕ್ಕೆ ಹಾಲಿ 3 ಲಕ್ಷ ರೂ. ಮಾತ್ರ ನೀಡಲಾಗುತ್ತಿದ್ದು, ಈ ಮೊತ್ತವನ್ನು 20 ಲಕ್ಷ ರೂ.ಗೆ ಹೆಚ್ಚಳ ಮಾಡುವಂತೆಯೂ ಮುಜರಾಯಿ ಸಚಿವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ. ಇದಕ್ಕೆ ಸಿಎಂ ಸಿದ್ದು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನೂ ಇದೆ ಸ್ವಾಮಿ!
ಇನ್ನೂ ಇದೆ ಸ್ವಾಮಿ. ಅಕ್ಕಪಕ್ಕದ ರಾಜ್ಯಗಳ ಹಲವಾರು ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ರಾಜ್ಯದ ಭಕ್ತರು ತಂಗಲು ಸೂಕ್ತ ಯಾತ್ರಿ ನಿವಾಸಗಳು ಇಲ್ಲ. ಹಾಗಾಗಿ ಅವುಗಳನ್ನು ನಿರ್ಮಾಣ ಮಾಡಲು 15 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ನೀಡುವಂತೆಯೂ ಮುಖ್ಯಮಂತ್ರಿಗೆ ಅವರು ಮನವಿ ಮಾಡಿದ್ದಾರೆ.

ಯಾತ್ರಿ ನಿವಾಸಗಳಿಗೂ ಮೋಕ್ಷ
ತಿರುಪತಿ, ಪಂಡರಾಪುರ, ಶ್ರೀಶೈಲ ಮುಂತಾದ ಕಡೆಗಳಲ್ಲಿ ಯಾತ್ರಿ ನಿವಾಸಗಳನ್ನು ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಈ ಬಾಬ್ತಿಗೆ ಹಾಲಿ ನಾಲ್ಕು ಕೋಟಿ ರೂ. ಅನುದಾನ ದೊರೆಯುತ್ತಿದ್ದು, ಇದನ್ನು 15 ಕೋಟಿ ರೂ.ಗಳಿಗೆ ಹೆಚ್ಚಿಸುವಂತೆಯೂ ಮನವಿ ಮಾಡಲಾಗಿದೆ ಎಂದು ಸಚಿವ ಪ್ರಕಾಶ್ ಹುಕ್ಕೇರಿ ಅವರು ಹೇಳಿದ್ದಾರೆ.












Click it and Unblock the Notifications