ಕ್ಯಾನ್ಸರಿಗೆ ಹೆದರಿ ವೃದ್ಧ ದಂಪತಿ ಆತ್ಮಹತ್ಯೆ

ಮಂಗಳವಾರ ರಾತ್ರಿ 10.30ರ ನಂತರ ಮತ್ತು ಬುಧವಾರ ಬೆಳಗಿನ ಜಾವ 6.30ರೊಳಗೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಅವರ ಸಂಬಂಧಿ ದಿಲೀಪ್ ಎಂಬುವವರು ಬುಧವಾರ ಬೆಳಗ್ಗೆ ಮನೆಗೆ ಬಂದಾಗ ಈ ದುರ್ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಸಾವಿಗೀಡಾದವರನ್ನು ಪದ್ಮನಾಥ (74) ಮತ್ತು ಅವರ ಪತ್ನಿ ಯಮುನಾ (60) ಎಂದು ಗುರುತಿಸಲಾಗಿದೆ. ಪದ್ಮನಾಥ ಶಾಲೆಯೊಂದರಲ್ಲಿ ದೈಹಿಕ ತರಬೇತುದಾರರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗಳಿಗೆ ಐವರು ಹೆಣ್ಣುಮಕ್ಕಳಿದ್ದು, ಓರ್ವ ಮಗನಿದ್ದಾನೆ.
ಸಾವಿಗೆ ಶರಣಾಗುವ ಮುನ್ನ ಅವರು ಮರಣಪತ್ರ ಬರೆದಿಟ್ಟಿದ್ದಾರೆ. ಎರಡು ವರ್ಷಗಳಿಂದ ಯಮುನಾ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಲು ಆಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಮರಣಪತ್ರದಲ್ಲಿ ಬರೆದಿದ್ದಾರೆ.
ಮತ್ತೊಂದು ಮಾಹಿತಿಯ ಪ್ರಕಾರ, ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅವರ ಮನೆ ಕುಸಿದುಬಿದ್ದಿತ್ತು. ಈ ಕಾರಣದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಮತ್ತು ತನಿಖೆಯ ನಂತರ ನಿಜ ಸಂಗತಿ ತಿಳಿಯಬೇಕಿದೆ.












Click it and Unblock the Notifications