ಕಳ್ರನ್ನ ಹಿಡಿಯೋಕೆ ಪೊಲೀಸ್ರಿಗೆ ಸೈಕಲ್,ಹೊಡೀರಿ ಚಪ್ಪಾಳೆ
ಅಧಿಕಾರದ ಚುಕ್ಕಾಣಿ ಹಿಡಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಸರಕಾರ ಒಂದೇ ತಿಂಗಳಲ್ಲಿ ಪೈಪೋಟಿಗೆ ಬಿದ್ದಂತೆ ಭರಪೂರ ಜನಪರ ಘೋಷಣೆಯಲ್ಲಿ ತೊಡಗಿದೆ.
ಅದಕ್ಕೆ ಬೇಕಾಗುವ ಸಂಪನ್ಮೂಲ, ಬೊಕ್ಕಸದ ಆರ್ಥಿಕ ಸುವ್ಯವಸ್ಥೆಯನ್ನು ಗಮನದಲ್ಲಿ ಇಟ್ಟುಕೊಂಡು ಸರಕಾರ ಜನಪರ ಘೋಷಣೆಯಲ್ಲಿ ತೊಡಗಿದೆಯೋ ಅಥವಾ ಮುಂಬರುವ ಲೋಕಸಭಾ ಚುನಾವಣೆಯೋ ಅನ್ನುವುದು ಸಾರ್ವಜನಿಕ ವಲಯದಲ್ಲಿರುವ ಗೊಂದಲ.
ಸಾರ್ವಜನಿಕರ ಈ ಗೊಂದಲಕ್ಕೆ ಒಂದು ಉದಾಹರಣೆ ಕೊಡಬಹುದಾದರೆ ಒಂದು ರೂಪಾಯಿ ಅಕ್ಕಿ ಸ್ಕೀಂ. ಸಿದ್ದರಾಮಯ್ಯನವರ ಈ ಕನಸಿನ ಸ್ಕೀಂಗೆ ಈಗ ಜುಲೈ ತಿಂಗಳಲ್ಲಿ ಮತ್ತೆ ಮಗುದೊಮ್ಮೆ ಮಹೂರ್ತ ಮುಂದೂಡಲಾಗಿದೆ.
ಇನ್ನು ಇದೇ ಶುಕ್ರವಾರ (ಜೂ 14) ಗೃಹ ಇಲಾಖೆ ತೆಗೆದುಕೊಂಡ ಪೊಲೀಸ್ ಪೇದೆಗಳ ಮೇಲೆ ಪ್ರಾಯೋಗಿಕ "ಪ್ರಯೋಗ". ಬೆಂಗಳೂರು ದಕ್ಷಿಣ ವಿಭಾಗದ 18 ಠಾಣೆಗಳಲ್ಲಿ ಸೈಕಲ್ ಬೀಟ್ ವ್ಯವಸ್ಥೆ ಜಾರಿಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ವಿಭಾಗದ ಪ್ರತಿ ಠಾಣೆಗಳಿಗೆ ಮೂರು ಸೈಕಲ್ ಖರೀದಿಸಲೂ ಇಲಾಖೆ ನಿರ್ಧರಿಸಿದೆ.
ಕೆಳಹಂತದ ಅಂದರೆ ಪೇದೆಗಳ ಮೂಲಕ ಸೈಕಲ್ ಬೀಟ್ ವ್ಯವಸ್ಥೆ ಜಾರಿಯಾಗಲಿದೆ. ಈ ವ್ಯವಸ್ಥೆ ಯಶಸ್ವಿಯಾದರೆ ಬೆಂಗಳೂರು ಮಹಾನಗರದ ಇತರ ಆರು ವಿಭಾಗಳಿಗೂ ಈ ವ್ಯವಸ್ಥೆ ಜಾರಿಯಾಗಲಿದೆ.
ಗೃಹ ಇಲಾಖೆ ತೆಗೆದುಕೊಳ್ಳುವ ಯಾವುದೇ ನಿರ್ಧಾರ ನೇರವಾಗಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ ಈ ಸೈಕಲ್ ಬೀಟ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಚರ್ಚೆ ಆರಂಭವಾಗಿದೆ.
ಪೊಲೀಸರು ಮತ್ತು ಸಾರ್ವಜನಿಕರು ಈ ವ್ಯವಸ್ಥೆಯ ಸಾಧಕ, ಬಾಧಕದ ಬಗ್ಗೆ ಏನಂತಾರೆ? ಬನ್ನಿ ಓದೋಣ..

ಡಿಸಿಪಿ - ಸೈಕಲ್ ಬೀಟ್ ವ್ಯವಸ್ಥೆ
ಡಿಸಿಪಿ ನೀಡುವ ಹೇಳಿಕೆ ಪ್ರಕಾರ ಕಳ್ಳತನ ಪ್ರಕರಣ ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಇದೊಂದು ಉತ್ತಮ ಪ್ರಯತ್ನ.ಹಗಲು ಹೊತ್ತು ರೌಡಿಗಳ, ಕಳ್ಳಕಾಕರರ ಉಪಟಳ ನಿಯಂತ್ರಿಸಬಹುದು. ಸೈಕಲ್ ಹೊಡೆಯುವುದರಿಂದ ನಮ್ಮ ಪೊಲೀಸರ ಆರೋಗ್ಯ ಕೂಡಾ ಸುಧಾರಿಸಲಿದೆ.

ಜ್ಯೋತಿ ಪ್ರಕಾಶ್ ಮಿರ್ಜಿ ಏನಂತಾರೆ?
ಇದೊಂದು ಉತ್ತಮ ಪ್ರಯತ್ನವನ್ನು ಡಿಸಿಪಿ ರೇವಣ್ಣ ಜಾರಿಗೆ ತಂದಿದ್ದಾರೆ. ಸದ್ಯ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾಗಿ ನಗರದ ಇತರ ವಿಭಾಗಗಳಿಗೂ ವಿಸ್ತರಿಸಲು ಚಿಂತಿಸಲಾಗುತ್ತಿದೆ.

ಪೇದೆಗಳ ಅಸಮಾಧಾನ
ಪಾತಕ ಜಗತ್ತು ಹಿಂದಿನಂತಲ್ಲಾ, ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಪುಂಡರು ನಮ್ಮ ಮೇಲೆಯೂ ತಿರುಗಿ ಬೀಳುವ ಸಾಧ್ಯತೆ ಇಲ್ಲದಿಲ್ಲ. ಅತಿ ಸೂಕ್ಷ್ಮ ಪ್ರದೇಶದಲ್ಲಿ ನಾವು ಗಸ್ತು ತಿರುಗುವುದು ಹೇಗೆ.

ಇದು ಒಳ್ಳೆಯ ಪ್ರಯತ್ನವಲ್ಲ
ಕೆಲವೊಂದು ಪ್ರದೇಶಗಳು ಎತ್ತರದಲ್ಲಿರುತ್ತದೆ, ಕೆಲವೊಓದು ಕೆಳಗಿನ ಪ್ರದೇಶದಲ್ಲಿರುತ್ತದೆ. ಎಲ್ಲಾ ಕಡೆಗೂ ಸೈಕಲ್, ವೈರ್ಲೆಸ್ ತೆಗೆದುಕೊಂಡು ಹೋಗಲಾಗುವುದಿಲ್ಲ. ಹೀಗಿರುವಾಗ ಸಹದ್ಯೋಗಿಗಳ ಜೊತೆ ಸಂಪರ್ಕ ಸಾಧಿಸುವುದು ಹೇಗೆ ಎನ್ನುವುದು ಪೇದೆಗಳ ಅಳಲು

ಸಾರ್ವಜನಿಕರ ಅಭಿಪ್ರಾಯ - ಗಿರಿನಗರ
ಸೈಕಲ್ ನಲ್ಲಿ ಪೇದೆಗಳು ಸುತ್ತಾಡುತ್ತಿದ್ದರೆ ಸಣ್ಣ ಕಳ್ಳರಿಗೆ, ಬಾರ್ ಮುಂದೆ ಗಲಾಟೆ ಮಾಡುವವರಿಗೆ ಭಯ ಹುಟ್ಟುವುದು ಸಹಜ. ಆದರೆ ರಾತ್ರಿ ಹೊತ್ತು ಈ ಪದ್ದತಿ ಸೂಕ್ತವಲ್ಲ ಎನ್ನುತ್ತಾರೆ ಗಿರಿನಗರ ನಿವಾಸಿ ವೈ ಕೆ ಹನುಮಂತಪ್ಪ.

ಸಾರ್ವಜನಿಕರ ಅಭಿಪ್ರಾಯ - ವಿದ್ಯಾಪೀಠ
ಈ ಆಧುನಿಕ ಜಗತ್ತಿನಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಈಗಿರುವ ಬಂದೂಕುಗಳೇ ವೇಸ್ಟ್, ಹೀಗಿರುವಾಗ ಸೈಕಲ್ ಬೀಟ್ ವ್ಯವಸ್ಥೆ ಎನ್ನುವುದು ಶುದ್ದ ಅಪ್ರಯೋಜಕ ಕ್ರಮ. ಇಲಾಖೆ ಈ ಪದ್ದತಿಯನ್ನು ರಿವರ್ಸ್ ಮಾಡುವುದೇ ಸೂಕ್ತ ಎನ್ನುತ್ತಾರೆ ಚಿಲ್ಲರೆ ಅಂಗಡಿ ವ್ಯಾಪಾರಿ ಕೆ ಎಲ್ ರಾಮಕೃಷ್ಣ.

ಸಾರ್ವಜನಿಕರ ಅಭಿಪ್ರಾಯ - ಗವಿಪುರ
ಪಲ್ಸರ್, ಚೀತಾ ಇದ್ದುಕೊಂಡೇ ಕಳ್ಳರನ್ನು, ಪಾತಕಿಗಳನ್ನು ಹಿಡಿಯಲು ಇಲಾಖೆ ಸಂಪೂರ್ಣ ಯಶಸ್ವಿಯಾಗಿಲ್ಲ. ಬೈಕಿನಲ್ಲಿ ಬಂದು ಸರಗಳ್ಳತನ ಮಾಡುವ ಕಳ್ಳರನ್ನು ಹಿಡಿಯಲು ಸೈಕಲ್ ಬೀಟ್ ವ್ಯವಸ್ಥೆಯಿಂದ ಸಾಧ್ಯವೇ ಅನ್ನುತ್ತಾರೆ ಗವಿಪುರಂ ರಿಟೈರ್ಡ್ ಸರಕಾರಿ ಉದ್ಯೋಗಿ ಎಂ ಸುಬ್ರಮಣ್ಯ ನಾಯ್ಡು.

ಸಾರ್ವಜನಿಕರ ಅಭಿಪ್ರಾಯ - ತ್ಯಾಗರಾಜ ನಗರ
ಮೇಲ್ನೋಟಕ್ಕೆ ಇದು ಸೂಕ್ತ ಕ್ರಮವಲ್ಲ ಎನ್ನುವುದು ನನ್ನ ಅಭಿಪ್ರಾಯ, ಆದರೆ ಈ ಪದ್ದತಿ ಜಾರಿಗೆ ತರುವ ಹಿಂದಿನ ಉದ್ದೇಶ ಇಲಾಖೆಗೆ ತಿಳಿದಿರುತ್ತದೆ. ಸೋ, ಹೆಚ್ಚಿನ ಕಾಮೆಂಟ್ ಇದರ ಬಗ್ಗೆ ಅಗತ್ಯವಿಲ್ಲ ಎನ್ನುವುದು ತ್ಯಾಗರಾಜ ನಗರದಲ್ಲಿ ವಾಸಿಸಿರುವ ಮೈಸೂರು ಬ್ಯಾಂಕ್ ಉದ್ಯೋಗಿ ಆಂಜನಪ್ಪ ಅಭಿಪ್ರಾಯ ಪಡುತ್ತಾರೆ.












Click it and Unblock the Notifications