ಯಡಿಯೂರಪ್ಪ ಬಿಜೆಪಿಗೆ ಮರಳಲು ಶೆಟ್ಟರ್ ಹಸಿರು ನಿಶಾನೆ
ಬೆಂಗಳೂರು, ಜೂನ್ 12: ಇದು ಯಾವುದರ ಮುನ್ಸೂಚನೆಯೋ ಯಾವುದರ ಪ್ರತಿಫಲವೋ ಗೊತ್ತಿಲ್ಲ ಅಂತೂ ಮಾಜಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿ ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಅತ್ತ ಲೋಹ ಪುರುಷ ಕರಗಿ ನೀರಾಗಿರುವುದರ ಪ್ರತಿಫಲವೋ ಅಥವಾ ಮೋದಿ ಪಟ್ಟಾಭಿಷೇಕದ ಪರಿಣಾಮವೋ ಅಥವಾ ರಾಜ್ಯದಲ್ಲಿ ಬಿಜೆಪಿ ಮತ್ತು ಕೆಜೆಪಿ ಸಮಾನ ದುಃಖಿಗಳು ಆಗಿರುವುದರ ಪ್ರತಿಫಲವೋ ಅಂತೂ ಯಡಿಯೂರಪ್ಪ ವಾಪಸಾತಿ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.

ನಿನ್ನೆ ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಬಿಜೆಪಿಗೆ ಮರಳುವ ಬಗ್ಗೆ ಅಂತಿಮಕ ತೀರ್ಮಾನ ಕೈಗೊಳ್ಳುವೆ ಎಂದು ಯಡಿಯೂರಪ್ಪ ಘೋಷಿಸುತ್ತಿದ್ದಂತೆ ಇತ್ತ ಜಗದೀಶ್ ಶೆಟ್ಟರ್ ಅವರು ಸಹ ಅದೇ ಧಾಟಿಯ feelers ರವಾನಿಸಿದ್ದಾರೆ.
ಯಾರ ವಿರೋಧವೂ ಇಲ್ಲ: ಬಿಜೆಪಿ ಮಾಜಿ ನಾಯಕ ಯಡಿಯೂರಪ್ಪ ಅವರು ಮರಳಿ ಬಿಜೆಪಿಗೆ ಬರಲು ಪಕ್ಷದಲ್ಲಿ ಯಾರ ವಿರೋಧವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಬೇಕು ಎಂಬ ಅಭಿಪ್ರಾಯ ಪಕ್ಷದಲ್ಲಿರುವ ಬಹುತೇಕರಲ್ಲಿದೆ. ಆದರೆ, ಯಾರೂ ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ ಅಷ್ಟೆ ಎಂದು ಅವರು ಹೇಳಿದರು.
ವಿಧಾನಸಭೆಯ ಮೊಗಸಾಲೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಮತಗಳು ಹಂಚಿಕೆಯಾಗಿರುವುದನ್ನು ಪ್ರಸ್ತಾಪಿಸಿಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಆಹ್ವಾನಿಸಬೇಕು ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಅವರು ಸೂಚ್ಯವಾಗಿ ತಿಳಿಸಿದರು.
ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರು ಪರಸ್ಪರ ವಿಶ್ವಾಸದಿಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಗೆ ಬಂದರೂ ಅದು ಅಚ್ಚರಿಯಲ್ಲ. ಅಷ್ಟೇ ಅಲ್ಲ, ಬಿಜೆಪಿಯಿಂದಲೇ ಯಡಿಯೂರಪ್ಪ ಅವರಿಗೆ ಮತ್ತೆ ಪಕ್ಷಕ್ಕೆ ಬರುವಂತೆ ಆಹ್ವಾನ ಹೋಗಲೂಬಹುದು ಎಂದು ಹೇಳಿದರು.
ರಹಸ್ಯ ಸಭೆ: ಲಭ್ಯ ಮಾಹಿತಿಗಳ ಪ್ರಕಾರ ಜಗದೀಶ್ ಶೆಟ್ಟರ್, ಡಿವಿ ಸದಾನಂದ ಗೌಡ ಹಾಗೂ ಆರ್ ಅಶೋಕ್ ಮಂಗಳವಾರ ಬಸವನಗುಡಿಯ ರಹಸ್ಯ ಸ್ಥಳವೊಂದರಲ್ಲಿ ಸಭೆ ನಡೆಸಿ, ಯಡಿಯೂರಪ್ಪರನ್ನು ಪಕ್ಷಕ್ಕೆ ವಾಪಸ್ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಗಮನಾರ್ಹವೆಂದರೆ ಯಡಿಯೂರಪ್ಪ ಪುನರಾಗಮನದ ಕಡು ವಿರೋಧಿ ಅನಂತ ಕುಮಾರ್ ಅನುಪಸ್ಥಿತಿಯಲ್ಲಿ ಈ ರಹಸ್ಯ ಸಭೆ ನಡೆದಿದೆ. ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪ ಕೂಡ ಶಾಸಕರು, ಆರೆಸ್ಸೆಸ್ ನಾಯಕರ ಒತ್ತಾಸೆಯಿಂದ ನಿಲುವು ಬದಲಿಸುವ ಹಾದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications