ಅಡ್ವಾಣಿ ರಾಜೀನಾಮೆ ನೀಡಿದ್ದೇಕೆ? ಸತ್ಯ ಬಹಿರಂಗ
ನವದೆಹಲಿ, ಜೂ. 11 : ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟು ರಾಜೀನಾಮೆಯ ನಾಟಕವಾಡಿದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಅಸಲಿ ಬಣ್ಣ ಬಯಲಾಗಿದೆ. ಅವರು ರಾಜೀನಾಮೆ ನೀಡಲು ನಾಯಕರು ಪಕ್ಷದ ತತ್ತ್ವ, ಸಿದ್ಧಾಂತ ತೊರೆದಿದ್ದಾರೆ, ವೈಯಕ್ತಿಕ ಅಜೆಂಡಾ ಹೊಂದಿದ್ದಾರೆ ಎಂಬ ಅವರ ಆರೋಪಗಳು ಕೂಡ ಹುಸಿ ಬಾಂಬ್ ನಂತಾಗಿವೆ.
ಆದರೆ, ಅಸಲಿಯತ್ತೇನೆಂದರೆ, ಅಡ್ವಾಣಿ ಅವರು ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲು ಮೂರು ಷರತ್ತುಗಳನ್ನು ಒಡ್ಡಿದ್ದರು ಎಂದು ಮಿಡ್ ಡೇ ವರದಿ ಮಾಡಿದೆ. ಆ ಷರತ್ತುಗಳನ್ನು ಒಪ್ಪಿದರೆ ಮಾತ್ರ ತಾವು ಇಟ್ಟ ಹೆಜ್ಜೆಯನ್ನು ಹಿಂದಿಡುವುದಾಗಿ 'ಬ್ಲಾಕ್ ಮೇಲ್' ತಂತ್ರವನ್ನು ಅನುಸರಿಸಿದ್ದರು. ಆ ಷರತ್ತುಗಳನ್ನು ಬಿಜೆಪಿಯ ನಾಯಕರು ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ಅಡ್ವಾಣಿ ಇಂಗು ತಿಂದ ಮಂಗನಂತಾಗಿದ್ದಾರೆ.

ಏನು ಆ ಷರತ್ತುಗಳು?
ಷರತ್ತು 1 : ತಮ್ಮನ್ನು ಪ್ರಧಾನಿ ಹುದ್ದೆ ಅಭ್ಯರ್ಥಿಯನ್ನಾಗಿ ಮಾಡುವುದು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ಆರು ತಿಂಗಳ ಕಾಲ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ನಂತರ ಸಮ್ಮಿಶ್ರ ಸರಕಾರ ಆರಿಸಿದ ಅಭ್ಯರ್ಥಿಗೆ ಪ್ರಧಾನಿ ಪದವಿಯನ್ನು ಬಿಟ್ಟುಕೊಡುವುದು.
ದಶಕಗಳ ಕಾಲ ಬಿಜೆಪಿಗಾಗಿ ಜೀವವನ್ನು ತೇದ ತಾವು ಪ್ರಧಾನಿ ಪಟ್ಟಕ್ಕೆ ತಕ್ಕ ಅಭ್ಯರ್ಥಿ ಎಂದು ಅವರು ಪಟ್ಟುಹಿಡಿದಿದ್ದರು. ತಮಗೆ 85 ವರ್ಷ ವಯಸ್ಸಾಗಿದ್ದರೂ ಚುಕ್ಕಾಣಿ ಹಿಡಿಯಲು ತಾವಿನ್ನೂ ಸಮರ್ಥರು ಎಂದು ಪಕ್ಷಕ್ಕೆ ಮನವರಿಕೆ ಮಾಡಿಕೊಡಲು ಅವರು ಸಾಕಷ್ಟು ಪ್ರಯತ್ನ ನಡೆಸಿದ್ದರು.
ಷರತ್ತು 2 : ನರೇಂದ್ರ ಮೋದಿ ಅವರನ್ನು ಲೋಕಸಭೆ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬಾರದು. ಅವರನ್ನು ಚುನಾವಣಾ ಸಂಯೋಜಕನನ್ನಾಗಿ ಮಾಡಬೇಕು.
ಷರತ್ತು 3 : ಒಂದು ವೇಳೆ ನರೇಂದ್ರ ಮೋದಿ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರೆ ಅವರು ತಮಗೆ (ಅಡ್ವಾಣಿಗೆ) ರಿಪೋರ್ಟ್ ಮಾಡಿಕೊಳ್ಳಬೇಕು ಮತ್ತು ಎಲ್ಲ ಪ್ರಮುಖ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳಬೇಕು.
ತಾವೊಂದು ಬಗೆದಿದ್ದರೆ ಆರೆಸ್ಸೆಸ್ಸ್ ಇನ್ನೊಂದು ಬಗೆದಿತ್ತು. ನರೇಂದ್ರ ಮೋದಿಯವರೇ ಚುನಾವಣಾ ಸಮಿತಿಯ ಅಧ್ಯಕ್ಷರಾಗಬೇಕು ಎಂದು ಪಟ್ಟುಹಿಡಿದಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಣತಿಯಂತೆ ಮೋದಿಯವರನ್ನು ಗೋವಾ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಚುನಾವಣಾ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಯಿತು ಮತ್ತು ಅಡ್ವಾಣಿಯವರನ್ನು ಕಡೆಗಣಿಸಲಾಯಿತು.
ಆದರೆ, ಎಲ್ಲ ಷರತ್ತುಗಳನ್ನು ಬಿಜೆಪಿ ನಾಯಕರು ನಯವಾಗಿಯೇ ತಿರಸ್ಕರಿಸಿದ್ದರು. ಒಂದು ವೇಳೆ ಅಡ್ವಾಣಿಯವರು ಮನಸ್ಸು ಬದಲಿಸಿದರೆ, ಚಾರ್ಟರ್ಡ್ ವಿಮಾನದ ಮೂಲಕ ಅವರನ್ನು ಗೋವಾಗೆ ಕರೆತರಲು ರಾಜನಾಥ್ ಸಿಂಗ್ ಅವರು, ಉತ್ತರ ಪ್ರದೇಶದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ತಮ್ಮ ಮಗ ಪಂಕಜ್ ಅವರಿಗೆ ಅಣತಿ ಮಾಡಿದ್ದರು. ಅಡ್ವಾಣಿ ಕೊನೆಗೂ ತಮ್ಮ ಹಠ ಬಿಡಲೇ ಇಲ್ಲ.
ಇದೆಲ್ಲದರ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೈವಾಡವಿರುವುದು ಇದರಿಂದ ಸ್ಪಷ್ಟವಾಗಿದೆ. ಹಾಗೆಯೆ, ರಾಜೀನಾಮೆಯ ಹಿಂದೆ ಪಕ್ಷ, ತತ್ತ್ವ, ಸಿದ್ಧಾಂತ, ವೈಯಕ್ತಿಕ ಅಜೆಂಡಾ ಮಣ್ಣುಮಸಿಯೆಲ್ಲ ಕೇವಲ ನೆವವೆಂಬುದು ಕೂಡ ಸಾಬೀತಾಗಿದೆ. ಅಧಿಕಾರದಾಸೆಯ ಹಿಂದೆ ಬಿದ್ದಿದ್ದ ಅಡ್ವಾಣಿಯವರನ್ನು ಪಕ್ಷ ನಡುನೀರಿನಲ್ಲಿ ಕೈಬಿಟ್ಟಿದೆ. ಹಾಗಾದ್ರೆ, ಅಡ್ವಾಣಿಯವರ ಮುಂದಿನ ನಡೆಗಳೇನು?












Click it and Unblock the Notifications