ಅಡ್ವಾಣಿ ರಾಜೀನಾಮೆ ವಾಪಸಾತಿಗೆ 10 ಕಾರಣಗಳು
ನವದೆಹಲಿ, ಜೂ. 11 : ಭಾರತೀಯ ಜನತಾ ಪಕ್ಷಕ್ಕೆ ಬಿಸಿತುಪ್ಪವಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರ ರಾಜೀನಾಮೆ ಪ್ರಹಸನ ಮತ್ತು ಉದ್ಭವಿಸಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಸುಖಾಂತ್ಯವಾಗಿದೆ. ರಾಜನಾಥ್ ಸಿಂಗ್ ಅಡ್ವಾಣಿ ನಿವಾಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಡ್ವಾಣಿಯವರು ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದರು.
ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಅಡ್ವಾಣಿ ಅವರ ಮನವೊಲಿಸಲು ಭಾರೀ ಹರಸಾಹಸ ಪಡಬೇಕಾಯಿತು. ಮೊದಲು ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಅಡ್ವಾಣಿ ಅವರ ಜೊತೆ ಮಾತುಕತೆ ನಡೆಸಿದ್ದು ಅಡ್ವಾಣಿ ಅವರ ಮನವೊಲಿಕೆಗೆ ಕಾರಣವಾಗಿದೆ.
ಅಡ್ವಾಣಿಯವರು ಪತ್ರಿಕಾಗೋಷ್ಠಿಯಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ. ರಾಜೀನಾಮೆ ವಾಪಸ್ ಪಡೆಯಲು ಸಮ್ಮತಿಸಿದ್ದರೂ ಮೋದಿ ಅವರ ಆಯ್ಕೆಯ ಬಗ್ಗೆ ಅವರಿಗಿದ್ದ ಅಸಮಾಧಾನ ಇನ್ನೂ ಶಮನವಾದಂತೆ ಕಂಡುಬಂದಿಲ್ಲ. ಆದರೆ, ಸದ್ಯಕ್ಕೆ ಬಿಜೆಪಿಗೆ ಬೀಸೋ ದೊಣ್ಣೆ ತಪ್ಪಿದಂತಾಗಿದೆ.
ಅಡ್ವಾಣಿ ಮನವೊಲಿಕೆಯ ಹಿಂದಿನ ಕಾರಣಗಳು ಮುಂದಿನಂತಿವೆ.

ಪ್ರಧಾನಿ ಅಭ್ಯರ್ಥಿಯ ಹೆಸರು ಪ್ರಕಟವಿಲ್ಲ
ಅಡ್ವಾಣಿಯ ಅನುಮತಿ ಇಲ್ಲದೆ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವುದಿಲ್ಲ ಮತ್ತು ಅವರ ಅಣತಿಯಂತೆ ಪಕ್ಷ ಕಾರ್ಯನಿರ್ವಹಿಸುವುದು ಎಂದು ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ಭರವಸೆಯನ್ನು ನೀಡಿದ್ದಾರೆ.

ಸಂಸದೀಯ ಮಂಡಳಿ ವಾಗ್ದಾನ
ಅಲ್ಲದೆ, ಜೊತೆಗೆ ಅಡ್ವಾಣಿಯವರು ರಾಜೀನಾಮೆ ನೀಡಲು ನೀಡಿರುವ ಕಾರಣಗಳ ಬಗ್ಗೆ ಸಂಸದೀಯ ಮಂಡಳಿ ವಿಚಾರ ಮಾಡುವುದಾಗಿ ವಾಗ್ದಾನ ನೀಡಲಾಗಿದೆ.

ರಾಜನಾಥ್ ಸಿಂಗ್ ಸುಳಿವು
ರಾಣಾ ಪ್ರತಾಪ್ ಸಿಂಹ್ ಪುತ್ಥಳಿಯನ್ನು ಅನಾವರಣಗೊಳಿಸಲು ರಾಜಸ್ತಾನದ ಬನ್ಸವಾರಾಕ್ಕೆ ತೆರಳಿದ್ದ ರಾಜನಾಥ್ ಸಿಂಗ್ ಅಲ್ಲಿಂದಲೇ ಅಡ್ವಾಣಿಯವರು ರಾಜೀನಾಮೆ ಹಿಂಪಡೆಯುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ಸಂಜೆ 5.30ರ ಸುಮಾರಿಗೆ ರಾಜನಾಥ್ ಸಿಂಗ್ ಅವರು ಅಡ್ವಾಣಿಯವರನ್ನು ಭೇಟಿ ಮಾಡಿದರು.

ಜೆಡಿಯು ಮೈತ್ರಿ ತೊರೆಯುವ ಬೆದರಿಕೆ
ಈ ನಡುವೆ ಎನ್‌ಡಿಎ ಮೈತ್ರಿಕೂಟದಿಂದ ಹೊರಹೋಗುವ ಬೆದರಿಕೆಯನ್ನು ಜೆಡಿ(ಯು) ಒಡ್ಡಿತ್ತು. ಇದರಿಂದ ಬಿಜೆಪಿ ನಾಯಕರು ಸಾಕಷ್ಟು ಗಲಿಬಿಲಿಗೊಳಗಾದರು.

ಮೋಹನ್ ಭಾಗವತ್‌ರಿಂದ ಮನವೊಲಿಕೆ
ಜೈಪುರಕ್ಕೆ ತೆರಳಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್ ಅವರಿಗೆ ಮನವೊಲಿಕೆಯ ಜವಾಬ್ದಾರಿಯನ್ನು ವಹಿಸಿದ್ದರು. ಮೋಹನ್ ಭಾಗವತ್ ಅವರು ಅಡ್ವಾಣಿಯೊಡನೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಸಫಲರಾದರು.

ಆರೆಸ್ಸೆಸ್ ಪ್ರತಿನಿಧಿಗಳ ಭೇಟಿ
ಆರೆಸ್ಸೆಸ್ ಪ್ರತಿನಿಧಿ ಎಸ್ ಗುರುಮೂರ್ತಿ ಅವರು ಕೂಡ ಮುರಳಿ ಮನೋಹರ ಜೋಶಿ ಮತ್ತು ಮುರಳಿಧರ ರಾವ್ ಅವರೊಡಗೂಡಿ ಅಡ್ವಾಣಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

ಜಸ್ವಂತ್ ಸಿಂಗ್‌ರಿಂದ ಅಡ್ವಾಣಿ ಭೇಟಿ
ಮತ್ತೊಬ್ಬ ಹಿರಿಯ ನಾಯಕರಾದ ಜಸ್ವಂತ್ ಸಿಂಗ್ ಅವರು ಕೂಡ ಅಡ್ವಾಣಿಯವರನ್ನು ಭೇಟಿ ಮಾಡಿ, ರಾಜೀನಾಮೆ ನೀಡಿ ಅವರು ಮಾಡುತ್ತಿರುವ ತಪ್ಪಿನ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಇದೇ ಹಂತದಲ್ಲಿ ಸುಷ್ಮಾ ಸ್ವರಾಜ್ ಅವರು ಉಮಾ ಭಾರತಿ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

ಗಡ್ಕರಿ ಜೊತೆ ಅಡ್ವಾಣಿ ಮಾತುಕತೆ
ಅಡ್ವಾಣಿ ಅವರ ಕಟ್ಟಾ ಅನುಯಾಯಿಗಳಾದ ನಿತಿನ್ ಗಡ್ಕರಿ ಮತ್ತು ಉಮಾ ಭಾರತಿ ಅವರು ಮಂಗಳವಾರ ಬೆಳಿಗ್ಗೆ ಅಡ್ವಾಣಿ ಅವರ ನಿವಾಸದಲ್ಲಿ ಭೇಟಿಯಾಗಿ ಮನವೊಲಿಕೆಯ ಪ್ರಯತ್ನವನ್ನು ಮುಂದುವರಿಸಿದರು. ಅವರ ಜೊತೆ ಕೆಲ ಆರೆಸ್ಸೆಸ್ ಕಟ್ಟಾಳುಗಳು ಕೂಡ ಮಾತುಕತೆ ನಡೆಸಿದರು.

ಅಡ್ವಾಣಿಗೆ ಬೇರೆ ದಾರಿ ಇರಲಿಲ್ಲ
ಅಡ್ವಾಣಿ ಅವರು ಮುಂದಿಟ್ಟಿದ್ದ ಮೂರು ಬೇಡಿಕೆಗಳಿಗೆ ಬಗ್ಗಬಾರದು ಮತ್ತು ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದನ್ನು ಬದಲಾಯಿಸಬಾರದು ಎಂಬ ಕಠಿಣ ನಿಲುವನ್ನು ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ತಳೆದರು. ಇದರಿಂದ ಇಟ್ಟ ಹೆಜ್ಜೆಯನ್ನು ಹಿಂದಿಡದೆ ಅಡ್ವಾಣಿಯವರಿಗೆ ಬೇರೆ ದಾರಿಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ತುಟಿ ಪಿಟಕ್ ಅನ್ನದ ಮೋದಿ
ಈ ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದರೂ ತುಟಿ ಪಿಟಕ್ ಅನ್ನದ ನರೇಂದ್ರ ಮೋದಿ ತಮ್ಮ ಕೆಲಸದಲ್ಲಿ ತಾವು ಮುಳುಗಿದ್ದರು. ಅಡ್ವಾಣಿ ರಾಜೀನಾಮೆ ವಾಪಸಾತಿಯನ್ನು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications