ಅಡ್ವಾಣಿ ರಾಜೀನಾಮೆ : ಯಾರು ಏನು ಹೇಳಿದರು?

ನೋವು ತಂದಿದೆ : ಪಕ್ಷದ ಲಕ್ಷಾಂತರ ಕಾರ್ಯಕರ್ತರನ್ನು ಬೆಳೆಸಿದ ನಿಜವಾದ ಉಕ್ಕಿನ ಮನುಷ್ಯ ಅಡ್ವಾಣಿ ಅವರ ರಾಜೀನಾಮೆ ತುಂಬಾ ನೋವು ತಂದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅಡ್ವಾಣಿ ಅವರ ರಾಜೀನಾಮೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಬಿಜೆಪಿ ಸರ್ಕಾರವನ್ನು ಕಟ್ಟಿ ಬೆಳೆಸಿದ ಕೀರ್ತಿ ಅಡ್ವಾಣಿ ಅವರಿಗೆ ಸಲ್ಲುತ್ತದೆ. ಆದರೆ, ರಾಜೀನಾಮೆ ಏಕೆ ನೀಡಿದರು ಎಂದು ತಿಳಿದಿಲ್ಲ. ಅನಾರೋಗ್ಯದಿಂದಾಗಿ ಅವರು ಕಾರ್ಯಕಾರಣಿಗೆ ಗೈರು ಹಾಜರಾಗಿದ್ದರು. ಅವರ ರಾಜೀನಾಮೆ ನಿಜಕ್ಕೂ ನೋವು ತಂದಿದೆ ಎಂದರು. (ಪಕ್ಷದ ಎಲ್ಲಾ ಹುದ್ದೆಗಳಿಗೆ ಅಡ್ವಾಣಿ ರಾಜೀನಾಮೆ)
ಪಕ್ಷದಲ್ಲಿ ಅವರಿಗೆ ಸರಿಯಾದ ಸ್ಥಾನಮಾನವನ್ನು ಅಡ್ವಾಣಿ ಅವರಿಗೆ ನೀಡಲಾಗಿತ್ತು. ಆದರೆ, ಅವರು ಏಕೆ ರಾಜೀನಾಮೆ ನೀಡಿದರು ಎಂದು ತಿಳಿಯುತ್ತಿಲ್ಲ. ಬಿಜೆಪಿ ಪಕ್ಷಕ್ಕೆ ಅಡ್ವಾಣಿ ರಾಜೀನಾಮೆ ಬಹಳ ನಷ್ಟ ಉಂಟುಮಾಡಿದೆ ಎಂದ ಈಶ್ವರಪ್ಪ, ಖಾಸಗಿ ಕಾರ್ಯಕ್ರಮದಲ್ಲಿದ್ದೇನೆ, ಪಕ್ಷದ ನಾಯಕರೊಂದಿಗೆ ಚರ್ಚಿಸಿ, ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದಾಗಿ ಹೇಳಿದರು.
ಉತ್ತಮ ನಿರ್ಧಾರ : ಬಿಜೆಪಿ ಪಕ್ಷಕ್ಕೆ ತಡವಾಗಿ ಅಡ್ವಾಣಿ ರಾಜೀನಾಮೆ ನೀಡಿದ್ದಾರೆ. ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗಿತ್ತು ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಹೇಳಿದ್ದಾರೆ. ಬಿಜೆಪಿಯಲ್ಲಿ ಕೆಲವು ನಾಯಕರ ಹಿತಾಸಕ್ತಿಯೇ ಮುಖ್ಯವಾಗಿದೆ. ಅವರು ಉಳಿದ ನಾಯಕರಿಗೆ ಸರಿಯಾದ ಸ್ಥಾನಮಾನ ನೀಡುತ್ತಿಲ್ಲ. ಆದ್ದರಿಂದ ಹಲವು ದಿನಗಳಿಂದ ಅಡ್ವಾಣಿ ಅವರನ್ನು ಕಡೆಗಣಿಸಲಾಗಿತ್ತು. ಕೊಂಚ ತಡವಾಗಿಯಾದರೂ ಅಡ್ವಾಣಿ ರಾಜೀನಾಮೆ ನೀಡಿದ್ದಾರೆ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ. [ಅಡ್ವಾಣಿ ಪತ್ರದಲ್ಲೇನಿದೆ?]
ಹಿರಿಯರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ : ಅಡ್ವಾಣಿ ಮತ್ತು ವಾಜಪೇಯಿ ಮುಂತಾದ ನಾಯಕರು ಪಕ್ಷ ಕಟ್ಟಿ ಬೆಳೆಸಿದವರು. ಅವರು ಎಲ್ಲಾ ನಿರ್ಧಾರಗಳನ್ನು ತುಂಬಾ ಆಲೋಚಿಸಿ ತೆಗೆದುಕೊಳ್ಳುತ್ತಾರೆ. ಅಂತಹ ಹಿರಿಯ ನಾಯಕರ ನಿರ್ಧಾರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಅಡ್ವಾಣಿ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಎಂದು ಸದಾನಂದಗೌಡ ಒತ್ತಾಯಿಸಿದ್ದಾರೆ.
ಅಡ್ವಾಣಿ ಶ್ರಮ ಮರೆತಿದ್ದಾರೆ : ಬಿಜೆಪಿ ಪಕ್ಷದ ಗುಂಪುಗಾರಿಕೆ ಅಡ್ವಾಣಿ ಅವರ ರಾಜೀನಾಮೆಯಿಂದ ಹೊರಬಂದಿದೆ. ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ 182 ಸ್ಥಾನಗಳನ್ನು ಗೆಲ್ಲುವಲ್ಲಿ ಅಡ್ವಾಣಿ ಅವರ ಪಾತ್ರ ಪ್ರಮುಖವಾಗಿತ್ತು. ಸದ್ಯ ಪಕ್ಷದವರು ಅವರ ಶ್ರಮ ಮರೆತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಸಭೆ ಚುಣಾವಣೆ ಎದುರಾಗುತ್ತಿರುವ ಸಂದರ್ಭದಲ್ಲಿ ಅಡ್ವಾಣಿ ಅವರ ಅನುಭವ ಪಕ್ಷಕ್ಕೆ ಅಗತ್ಯವಾಗಿತ್ತು. ಪಕ್ಷದ ನಾಯಕರಿಗೆ ಇದು ಇಷ್ಟವಿಲ್ಲ. ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.












Click it and Unblock the Notifications