ಎಲ್ಲ ಹುದ್ದೆಗಳಿಗೆ ಎಲ್ ಕೆ ಅಡ್ವಾಣಿ ರಾಜೀನಾಮೆ

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ರವಾನಿಸಿರುವ ರಾಜೀನಾಮೆ ಪತ್ರದಲ್ಲಿ ತಾವು ರಾಷ್ಟ್ರೀಯ ಕಾರ್ಯಕಾರಣಿ, ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ 85 ವರ್ಷದ ಅಡ್ವಾಣಿ ಅವರು ಹೇಳಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿ, ಚುನಾವಣಾ ಸಮಿತಿ, ಸಂಸದೀಯ ಸಮಿತಿಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಎಲ್ ಕೆ ಅಡ್ವಾಣಿ ಅವರ ಈ ನಡೆ ಪಕ್ಷವನ್ನು ದಿಗ್ಭ್ರಮೆಗೊಳಿಸಿದೆ. 'ಅನಾರೋಗ್ಯ'ದ ಕುಂಟುನೆಪವೊಡ್ಡಿ ಅಡ್ವಾಣಿಯವರು ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ತಪ್ಪಿಸಿಕೊಂಡಿದ್ದು ನಿಜವಲ್ಲ ಎಂಬುದು ಅಡ್ವಾಣಿಯವರ ರಾಜೀನಾಮೆಯಿಂದ ನಿಜವಾಗಿದೆ. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ನರೇಂದ್ರ ಮೋದಿಯವರ ಆಯ್ಕೆಗೂ ತಮ್ಮ ಸಹಮತವಿಲ್ಲ ಎಂಬುದನ್ನು ಈ ಮೂಲಕ ಅವರು ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ನರೇಂದ್ರ ಮೋದಿ ಅವರು ಅಡ್ವಾಣಿ ಅವರೊಂದಿಗೆ ಮಾತನಾಡಿ ತಾವು ಹಿರಿಯ ನಾಯಕರ ಆಶೀರ್ವಾದ ಪಡೆದಿರುವುದಾಗಿ ಹೇಳಿದ್ದರು. ಅಡ್ವಾಣಿಯವರ ರಾಜೀನಾಮೆಯಿಂದ ಅವರ ಕಟ್ಟಾ ಹಿಂಬಾಲಕರು ಯಾವ ಕ್ರಮ ಅನುಸರಿಸಲಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
85 ವರ್ಷ ಹಿರಿಯರಾಗಿರುವ ಅಡ್ವಾಣಿಯವರು ರಾಜೀನಾಮೆ ನೀಡಿ ಯುವಪೀಳಿಗೆಗೆ ದಾರಿಮಾಡಿಕೊಡಬೇಕೆಂದು ಕೂಗು ಮೊದಲಿನಿಂದಲೂ ಎದ್ದಿತ್ತು. ಆದರೆ, ಈ ಕೂಗಿಗೆ ಅವರು ಕವಡೆಕಾಸಿನಷ್ಟು ಕಿಮ್ಮತ್ತು ನೀಡಿರಲಿಲ್ಲ. ತಾವಿನ್ನೂ ಸಮರ್ಥರೆಂದೇ ಅವರು ಬಿಂಬಿಸಿಕೊಳ್ಳುತ್ತಿದ್ದರು. ಗೋವಾ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಮೋದಿ ಅವರ ಕೈ ಮೇಲಾಗುತ್ತಿದ್ದಂತೆ ಬೇಸರಿಸಿಕೊಂಡು ರಾಜೀನಾಮೆ ಬಿಸಾಕಿದ್ದಾರೆ.
ಅಡ್ವಾಣಿ ಅವರು ಮೂರು ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರಷ್ಟೇ ಹೊರತು ಪ್ರಾಥಮಿಕ ಸದಸ್ಯತ್ವಕ್ಕಾಗಲಿ, ಸಂಸತ್ ಸದಸ್ಯತ್ವಕ್ಕಾಗಲಿ ರಾಜೀನಾಮೆ ನೀಡಿಲ್ಲ. ತಾವು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ. ಅವರ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲವೆಂದು ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಹೇಳುತ್ತಿದ್ದಾರೆ. ಅವರ ಮನವೊಲಿಕೆಯ ಪ್ರಯತ್ನವೂ ಆರಂಭವಾಗಿದೆ. [ಅಡ್ವಾಣಿ ಪತ್ರದಲ್ಲೇನಿದೆ?] [ಯಾರು ಏನು ಹೇಳಿದರು?]












Click it and Unblock the Notifications