ರಾಜೀನಾಮೆ ತಿರಸ್ಕಾರ, ಆದ್ರೆ ಅಡ್ವಾಣಿ ಪುರಸ್ಕರಿಸ್ತಾರಾ?

ಅಡ್ವಾಣಿಯರ ರಾಜೀನಾಮೆಯಿಂದ ಬಾಲ ಸುಟ್ಟ ಬೆಕ್ಕಿನಂತಾಗಿದ್ದ ಬಿಜೆಪಿ ಸೋಮವಾರ ಸಂಜೆ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ಮನೆಯಲ್ಲಿ ಸಂಸದೀಯ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ರವಿಶಂಕರ್ ಪ್ರಸಾದ್, ಅನಂತ್ ಕುಮಾರ್ ಮುಂತಾದ ಹಿರಿಯ ನಾಯಕರು ಭಾಗವಹಿಸಿದ್ದರು.
ಸಭೆಯ ನಂತರ ಮಾಧ್ಯವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಅಡ್ವಾಣಿಯವರ ರಾಜೀನಾಮೆಯನ್ನು ಬಿಜೆಪಿ ತಿರಸ್ಕರಿಸಿದೆ ಎಂದು ಹೇಳಿದ್ದಾರೆ. ಅಡ್ವಾಣಿಯಂಥ ಹಿರಿಯ ನಾಯಕರ ಮಾರ್ಗದರ್ಶನ ಈ ಸಂದರ್ಭದಲ್ಲಿ ಬಿಜೆಪಿಗೆ ಹಿಂದೆಂದಿಗಿಂತಲೂ ಅಧಿಕವಾಗಿದ್ದು, ಅವರ ಮಾರ್ಗದರ್ಶನದಲ್ಲಿಯೇ ಮುಂದಿನ ಲೋಕಸಭೆ ಚುನಾವಣೆಯನ್ನು ಎದುರಿಸಲಿದೆ ಎಂದು ಅವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಡ್ವಾಣಿ ಜತೆ ಮೋದಿ ಮಾತು : ಬಿಜೆಪಿಯ ಸಂಸದೀಯ ಮಂಡಳಿ ಸಭೆಗೆ ನರೇಂದ್ರ ಮೋದಿಯವರು ಹಾಜರಾಗಿಲ್ಲ. ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರದ ಬಗ್ಗೆ ರಾಜನಾಥ್ ಸಿಂಗ್ ಜೊತೆ ಮಾತನಾಡಿದ್ದು, ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧನಾಗಿರುವುದಾಗಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಅಡ್ವಾಣಿ ಜೊತೆ ಕೂಡ ಸುದೀರ್ಘ ಮಾತುಕತೆ ನಡೆಸಿದ್ದು, ಅವರು ರಾಜೀನಾಮೆ ಹಿಂಪಡೆಯುವ ಭರವಸೆಯಿದೆ, ಅವರು ಲಕ್ಷಾಂತರ ಅಭಿಮಾನಗಳನ್ನು ನಿರಾಶೆಗೊಳಿಸುವುದಿಲ್ಲ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ಸ್ ಆಘಾತ : ಅಡ್ವಾಣಿ ರಾಜೀನಾಮೆ ಸಲ್ಲಿಸಿರುವುದು ಆಘಾತಕಾರಿ ಮತ್ತು ದುರಾದೃಷ್ಟಕರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಆಘಾತ ವ್ಯಕ್ತಪಡಿಸಿದೆ. ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಎಂಜಿ ವೈದ್ಯ ಅವರು, ಅಡ್ವಾಣಿಯಂಥ ದೈತ್ಯ ನಾಯಕ ರಾಜೀನಾಮೆ ನೀಡಿದ್ದು ಆಘಾತಕಾರಿ. ಬಹುಶಃ ಆಂತರಿಕ ವಿದ್ಯಮಾನದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಇಚ್ಛಿಸದಿದ್ದರೆ ಈ ವಿಷಯದಲ್ಲಿ ಆರೆಸ್ಸೆಸ್ ಮೂಗು ತೂರಿಸುವುದಿಲ್ಲ ಎಂದಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಮೂಲ ತತ್ತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ವಿದ್ಯಮಾನಗಳು ನಡೆಯುತ್ತಿವೆ, ನಾಯಕರು ಸ್ವಾರ್ಥಿಗಳಂತೆ ವರ್ತಿಸುತ್ತಿದ್ದಾರೆ ಎಂದು ಬೇಸರಿಸಿಕೊಂಡು ಅಡ್ವಾಣಿಯವರು ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳು ಕೂಡ ಈ ವಿದ್ಯಮಾನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿವೆ.
ಬೇರೆಯದೇ ಹುನ್ನಾರ? : ಅಡ್ವಾಣಿಯವರ ರಾಜೀನಾಮೆ ಪ್ರಹಸನದ ಹಿಂದೆ ಬೇರೆಯದೇ ಹುನ್ನಾರವಿದೆ ಎಂಬ ಮಾತು ಕೂಡ ಕೇಳಿಬಂದಿದೆ. ಬಲ್ಲ ಮೂಲಗಳ ಪ್ರಕಾರ, ಅವರ ಕಟ್ಟಾ ಬೆಂಬಲಿಗರಾಗಿರುವ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದರು. ಅದು ಪುರಸ್ಕಾರವಾಗದ ಕಾರಣ ರಾಜೀನಾಮೆ ಬಿಸಾಕಿದ್ದಾರೆ.
ಟ್ವಿಟ್ಟಿಗರು ಏನಂತಾರೆ? : ಸಾರ್ವಜನಿಕರಿಗೆ ಈ ವಿದ್ಯಮಾನ ಅಚ್ಚರಿಯನ್ನೇನೂ ತಂದಿಲ್ಲ. ಚಿಕ್ಕಮಗುವಂತೆ ಸಿಟ್ಟು ಮಾಡಿಕೊಂಡು ರಾಜೀನಾಮೆ ನೀಡಿ ಅಡ್ವಾಣಿಯವರು ಇದ್ದಬದ್ದ ಗೌರವವನ್ನೂ ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ಬಿಜೆಪಿಯಲ್ಲಿ ಇರಬೇಕೆಂದು ಆಶಿಸುತ್ತೇವೆ, ಆದರೆ ನೀವು ಹೋಗುವುದೇ (ನಾಯಕತ್ವದಿಂದ ತೊಲಗುವುದೇ) ವಾಸಿ ಎಂದು ಮತ್ತೊಬ್ಬರು ಮಾರ್ಮಿಕವಾಗಿ ನುಡಿದಿದ್ದಾರೆ.












Click it and Unblock the Notifications