ಅಡ್ವಾಣಿ: ರಾಜಕೀಯ ನೇಪಥ್ಯದತ್ತ ಬಿಜೆಪಿ ಭೀಷ್ಮ
ಲಾಲ್ ಕೃಷ್ಣ ಅಡ್ವಾಣಿ ಎಂಬ ಹೆಸರು ಕೇಳುತ್ತಿದ್ದಂತೆ ಬಿಜೆಪಿಯ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಹೊಮ್ಮುವ ಕಾಲ ಈಗ ಇಲ್ಲದಿರಬಹುದು. ಆದರೆ, ಮನೆಯಲ್ಲಿ ಒಂದು ಹಿರಿಯ ತಲೆ ಸಲಹೆ ನೀಡುವುದನ್ನು ನಿಲ್ಲಿಸಿದರೆ ಮುಂದಿನ ಪೀಳಿಗೆಗೆ ಆಗುವ ಇರುಸು ಮುರುಸು ಈಗ ಬಿಜೆಪಿಯಲ್ಲೂ ಆಗುತ್ತಿದೆ. ಅಡ್ವಾಣಿ ರಾಜೀನಾಮೆ ಪಡೆಯುವುದು ಬಹುತೇಕ ಕಷ್ಟ. ಪಡೆದರೂ ಪ್ರಯೋಜನವಿಲ್ಲ. ಒಟ್ಟಾರೆ, ಅಡ್ವಾಣಿ ರಾಜಕೀಯ ಯುಗ ಅಂತ್ಯ ಕಂಡಿದೆ.
ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅನಾರೋಗ್ಯದ ನೆಪ ಹೇಳಿ ಪಕ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾರ್ಯಕಾರಿಣಿ ತಪ್ಪಿಸಿಕೊಂಡಾಗಲೇ ಹಲವಾರು ನಾಯಕರ ಎಡಗಣ್ಣು ಅದುರಿತ್ತು. ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿಸಿದ ಮೇಲೆ ಬಿಜೆಪಿಯಲ್ಲಿ ಆಡ್ವಾಣಿ ಯುಗ ಕಳೆದು, ಮೋದಿ ಯುಗ ಬರುತ್ತಿದೆ ಎಂಬ ಮಾತು ಈಗ ಅರ್ಥ ಪಡೆದುಕೊಳ್ಳುತ್ತಿದೆ.
ಭಾರತದ ಅತ್ಯಂತ ಅನುಭವಿ ರಾಜಕಾರಣಿ. ಲಾಲ್ ಕೃಷ್ಣ ಅಡ್ವಾಣಿ ಅವರ ರಾಜಕೀಯ ಜೀವನದ ಕೆಲವಾರು ಹೆಜ್ಜೆಗಳು ಪಕ್ಷಾತೀತವಾಗಿ ಎಲ್ಲರಿಗೂ ಅನುಕರಣೀಯವಾಗಿದೆ. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಅಡ್ವಾಣಿಯನ್ನು ಒಪ್ಪಿಕೊಳ್ಳಲು ಪಕ್ಷದಲ್ಲೇ ಹಲವಾರು ನಾಯಕರು ತಯಾರಿಲ್ಲ. ಎಂದಿದ್ದರೂ 'ದ್ವಿತೀಯ' ನಾಗೇ ಉಳಿದಿದ್ದು ಅಡ್ವಾಣಿಯ ಸಾಧನೆಯೋ ದೌರ್ಬಲ್ಯವೋ ಕಾಲವೇ ನಿರ್ಧರಿಸಲಿದೆ.
ವಾಜಪೇಯಿ, ಅಡ್ವಾಣಿ ಕಾಲದ ಬಿಜೆಪಿ ಈಗ ಬದಲಾಗಿದೆ. ಮೋದಿ ಎಂಬ ಗುಜರಾತಿನ ಪಕ್ಕಾ 'ಉದ್ಯಮಿ' ತನ್ನ ರಾಜಕೀಯ ಮಾಡಲು ಅಧಿಕಾರ ಪಡೆದುಕೊಂಡಿದ್ದಾರೆ. ಎನ್ ಡಿಎ ಕಥೆ ಏನಾಗಬಹುದು ಎಂಬ ಅಳುಕು ಮಾತ್ರ ಈಗ ಕಾಡುತ್ತಿದೆ. ಎನ್ ಡಿಎ ಕಥೆ ವ್ಯಥೆ ನಿರ್ಧಾರಕ್ಕೂ ಮುನ್ನ ಅಡ್ವಾಣಿ ಶಿಷ್ಯಂದಿರಿಗೆ ತಮ್ಮ ಭವಿಷ್ಯದ ಚಿಂತೆ ಕಾಡುತ್ತಿದೆ. ಇದೆಲ್ಲದರ ನಡುವೆ ಅಡ್ವಾಣಿ ಅವರ ರಾಜಕೀಯ ಜೀವನದ ತುಣುಕು ಇಲ್ಲಿ ಕಾಣಿರಿ...

ಬಾಲ್ಯ, ಓದು ಎಲ್ಲಿ?
ನವೆಂಬರ್ 1927ರಂದು ಅವಿಭಜಿತ, ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯ(ಇಂದಿನ ಕರಾಚಿ)ದ ಗೊರೆಗಾಂವ್ ನಲ್ಲಿ ಕಿಶೆನ್ ಚಂದ್ ಹಾಗೂ ಜ್ಞಾನಿದೇವಿ ಅವರ ಪುತ್ರರಾಗಿ ಲಾಲ್ ಕೃಷ್ಣ ಅಡ್ವಾಣಿ ಜನಿಸಿದರು. ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಶಾಲೆ ಮೆಟ್ರಿಕುಲೇಷನ್ ತನಕ ಓದು

ಆರೆಸ್ಸೆಸ್ ನತ್ತ ಆಕರ್ಷಣೆ
* 1942ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರ್ಪಡೆ
* ಅದೇ ವರ್ಷ ಹೈದರಾಬಾದಿನ ದಯಾರಾಮ್ ಗಿಡುಮಾಲ್ ನ್ಯಾಷನಲ್ ಕಾಲೇಜು ಸೇರ್ಪಡೆ
* 1944 ರಲ್ಲಿ ಕರಾಚಿಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭ
* 1947 ರ ಸೆ.12 ರಂದು ಸಿಂಧ್ ಪ್ರಾಂತ್ಯ ತೊರೆದು ಪ್ರೊಪೆಲ್ಲರ್ ಏರ್ ಕ್ರಾಫ್ಟ್ ಮೂಲಕ ದೆಹಲಿಗೆ ರವಾನೆ
* ಆಳ್ವಾರ್, ಭರತ್ ಪುರ, ಕೋಟಾ, ಬಂಡಿ, ಜಲವಾರ್ ಪ್ರಾಂತ್ಯದ ಆರೆಸ್ಸೆಸ್ ಕಾರ್ಯದರ್ಶಿಯಾಗಿ ಕೋಮು ಸಾಮರಸ್ಯ ದೇಶ ವಿಭಜನೆಯಿಂದ ಉಂಟಾದ ಗಲಭೆ ಹತ್ತಿಕ್ಕಿ ಕೋಮು ಸಾಮರಸ್ಯ ಕಾಯ್ದುಕೊಳ್ಳುವ ಜವಾಬ್ದಾರಿ

ಜನ ಸಂಘ ದಿಂದ ಜನತಾ ಪಾರ್ಟಿಯತ್ತ
ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿತ ಭಾರತೀಯ ಜನ ಸಂಘದ ಸದಸ್ಯತ್ವ.1957ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಹಾಯಕರಾಗಿ ಜವಾಬ್ದಾರಿ. ಜನಸಂಘದ ಪತ್ರಿಕೆ ಆರ್ಗನೈಸರ್ ಗೆ ಸಹಾಯಕ ಸಂಪಾದಕರಾದರು. 1970ರಲ್ಲಿ ರಾಜ್ಯಸಭೆಗೆ ಪ್ರವೇಶ. 1975ರಲ್ಲಿ ಸಂಘದ ಅಧ್ಯಕ್ಷರಾದರು. ಈ ನಡುವೆ 65ರಲ್ಲಿ ಕಮಲಾ ಅವರನ್ನು ಮದುವೆಯಾದರು. ಪ್ರತಿಭಾ ಹಾಗೂ ಜಯಂತ್ ಇಬ್ಬರು ಮಕ್ಕಳನ್ನು ಪಡೆದರು.
1975ರ ಜೂ.26ರಂದು ಎಮೆರ್ಜೆನ್ಸಿ ವಿರುದ್ಧ ತಿರುಗಿಬಿದ್ದ ಆರೋಪದ ಮೇಲೆ ಬೆಂಗಳೂರು ಕೇಂದ್ರ ಕಾರಾಗೃಹ ಸೇರಿದರು.
ಬಿಜೆಸ್ ಹಾಗೂ ಜಯಪ್ರಕಾಶ್ ನಾರಾಯಣ್ ಭಿನ್ನಪ್ರಾಯದ ಪರಿಣಾಮ ಮುಂದೆ ಜನಸಂಘದ ಸಹಚರ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ ಜನತಾ ಪಾರ್ಟಿ ಸೇರಿದ 1977ರಲ್ಲಿ ಲೋಕಸಭೆ ಪ್ರವೇಶ ಬಯಸಿದರು.
ಈ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು
* ಮಾರ್ಚ್ 1977 ರಿಂದ ಜುಲೈ 1979ರ ತನಕ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು.
* 1980-86: ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಅಧ್ಯಕ್ಷರಾಗಿ ಆಯ್ಕೆಯಾದರು.
* 1988ರಲ್ಲಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾದರು.
* 1988ರಲ್ಲಿ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು.
* 1999 ಹಾಗೂ 2004ರಲ್ಲಿ ಉಪ ಪ್ರಧಾನಿ
* 2009ರಲ್ಲಿ ವಿಪಕ್ಷ ನಾಯಕ, ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು.
* 2013 ಪಕ್ಷದ ಪ್ರಾಥಮಿಕ ಸದಸ್ಯತ್ವ, ಎನ್ ಡಿಎ ಸಂಚಾಲಕ ಹುದ್ದೆ ಬಿಟ್ಟು ಮಿಕ್ಕ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ

6 ರಥಯಾತ್ರೆ ಪಾಂಚಜನ್ಯ
1. ಗುಜರಾತಿನ ಸೋಮನಾಥದಲ್ಲಿ 'ರಾಮ ರಥ ಯಾತ್ರೆ' ಆರಂಭ. ಸೆ.25, 1990 ರಿಂದ ಆರಂಭಿಸಿ 30 ಅಕ್ಟೋಬರ್ 1990ಕ್ಕೆ ಅಯೋಧ್ಯೆ ತಲುಪಿತು.
* ಕೋಮು ಸಾಮರಸ್ಯಕ್ಕಾಗಿ ರಥಯಾತ್ರೆ ಎನ್ನಲಾಗಿತ್ತು ಆದರೆ, ಮಂದಿರ-ಮಸೀದಿ ವಿವಾದ ಆರಂಭವಾಯಿತು. ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ತಾರಕಕ್ಕೇರಿತು.
* ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ರಥವನ್ನು ನಿಲ್ಲಿಸಿ ಕರ ಸೇವಕರ ಮೇಲೆ ಶೂಟೌಟ್ ಗೆ ಆದೇಶಿಸಿದ್ದರು.
2. ಜನಾದೇಶ ಯಾತ್ರೆ: ದೇಶದ ನಾಲ್ಕು ಮೂಲೆ ತಲುಪುವ ಉದ್ದೇಶ. 1993 ಸೆ.11 ರಿಂದ ಮೈಸೂರಿನಿಂದ ಆರಂಭಗೊಂಡು ದೇಶದಾದ್ಯಂತ ಭೋಪಾಲ್ ನಲ್ಲಿ ಸಂಪನ್ನ. ಸಂವಿಧಾನನ 80ನೇ ಪರಿಚ್ಛೇದ ತಿದ್ದುಪಡಿಗೆ ಆಗ್ರಹ.
ಮಿಕ್ಕ 4 ರಥ ಯಾತ್ರೆ ವಿವರ ಮುಂದೆ

ಮಿಕ್ಕ ರಥಯಾತ್ರೆಗಳು
ಸ್ವರ್ಣಜಯಂತಿ ರಥಯಾತ್ರೆ: 1997ರ ಮೇ ಹಾಗೂ ಜುಲೈ ತಿಂಗಳಿನಲ್ಲಿ ದೇಶದಾದ್ಯಂತ ಸಂಚರಿಸಿತು. ಉತ್ತಮ ಆಡಳಿತ ನೀಡುವಲ್ಲಿ ನಂಬಿಕೆಯುಳ್ಳ ಬಿಜೆಪಿ 50ನೇ ಸ್ವಾತಂತ್ರ್ಯೋತ್ಸವ ಆಚರಿಸಲು ರಥಯಾತ್ರೆ
ಭಾರತ ಉದಯ ಯಾತ್ರೆ: 2004ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ನಡೆದ ರಥಯಾತ್ರೆ
ಭಾರತ ಸುರಕ್ಷಾ ಯಾತ್ರೆ: 6 ಏಪ್ರಿಲ್ ರಿಂದ 10 ಮೇ 2006. ದ್ವಾರಕದಿಂದ ದೆಹಲಿ ತನಕ ಅಂದಿನ ವಿಪಕ್ಷ ನಾಯಕ ಎಲ್ ಕೆ ಅಡ್ವಾಣಿ ನೇತೃತ್ವ ಹಾಗೂ ರಾಜನಾಥ್ ಸಿಂಗ್ ಅವರು ಜಗನ್ನಾಥ್ ಪುರಿಯಿಂದ ದೆಹಲಿ ತನಕ ರಥ ಮುನ್ನಡೆಸಿದರು.
ಜನ ಚೇತನ ಯಾತ್ರೆ: ಬಿಹಾರದ ಸಿತಾಬ್ ದಿಯಾರಾದಿಂದ ಅಕ್ಟೋಬರ್ 11,2011ರಂದು ಆರಂಭಗೊಂಡ ಯಾತ್ರೆ ಯುಪಿಎ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಡೆಸಿದ ಯಾತ್ರೆ.

ರಾಜಕೀಯ ಅನುಭವಗಳ ಗಣಿ
ಎಲ್ ಕೆ ಅಡ್ವಾಣಿ ಅವರ 'ಮೈ ಕಂಟ್ರಿ ಮೈ ಲೈಫ್' ಆತ್ಮ ಚರಿತ್ರೆ ಮಾತ್ರವಲ್ಲ. ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿ. 1900 ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ಹೊಸ ದಾಖಲೆ ಕೂಡಾ ನಿರ್ಮಿಸಿದೆ.
ಭಾರತೀಯ ಜನತಾ ಪಕ್ಷದ ಪ್ರಮುಖ ನಿರ್ಣಯಗಳಲ್ಲದೆ, ವಿಪಕ್ಷ ನಾಯಕರಾಗಿ ಉತ್ತಮ ಸಂಸದೀಯ ಪಟುವಾಗಿ ಅಡ್ವಾಣಿ ಗುರುತಿಸಿಕೊಂಡಿದ್ದರು. ಎನ್ ಡಿಎ ಮೈತ್ರಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಅಡ್ವಾಣಿ ಮುಖ್ಯಪಾತ್ರ ವಹಿಸಿದ್ದರು. ಸ್ವತಃ ತಮ್ಮ ಮೇಲೆ ಬಾಬ್ರಿ ಮಸೀದಿ ಧ್ವಂಸದ ಆರೋಪವಿದ್ದರೂ ಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರು. ಇದರ ಪರಿಣಾಮ ಕರ್ನಾಟಕ ಬಿಜೆಪಿಯಲ್ಲಿ ಪಕ್ಷ ಕಟ್ಟಿದ ಯಡಿಯೂರಪ್ಪ ಪಕ್ಷ ತೊರೆದರು. ಈಗ ಅಡ್ವಾಣಿ ಸರದಿ












Click it and Unblock the Notifications