ಲವ್ ಸೆಕ್ಸ್ ಮೋಸ, ಪ್ರಿಯತಮನಿಗೆ ಬಿತ್ತು ಗೂಸ

ಸ್ನೇಹಿತನೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗಲೇ ಹೊರಕ್ಕೆ ತಳ್ಳಿ ಹಳ್ಳವೊಂದರಲ್ಲಿ ಬೀಳಿಸಲು ಆತ ಯತ್ನಿಸಿದ್ದಾನೆ. ಇದನ್ನು ನೋಡಿ ಸಾರ್ವಜನಿಕರು ಆತನನ್ನು ಮತ್ತು ಸ್ನೇಹಿತನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಪಾರು ಮಾಡಿಲಾಗಿದೆ.
ಪ್ರೇಮ ಕಥೆಯ ವಿವರ : ಚೆನ್ನಪಟ್ಟಣದ ನಯಾಜ್ ಎಂಬ ಮುಸ್ಲಿಂ ಕೋಮಿನ ಯುವಕ ರಾಮನಗರದ ನಾಜನೀನ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಆಕೆಯ ಸಮ್ಮತಿಯೂ ಇತ್ತು. ತಂದೆ ತಾಯಿ ಕಳೆದುಕೊಂಡು, ಸಂಬಂಧಿಕರ ಮನೆಯಲ್ಲಿದ್ದ ನಾಜನೀನ್ ನಯಾಜ್ ಜೊತೆ ಮನೆಬಿಟ್ಟು ಓಡಿಬಂದಿದ್ದಾಳೆ.
ನಯಾಜ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ವಾರಗಟ್ಟಲೆ ತನ್ನ ಸ್ನೇಹಿತನ ಮನೆಯಲ್ಲಿಟ್ಟು ಮದುವೆಗೆ ಮುಂಚೆ ತನ್ನನ್ನು ಕೂಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾನೆ. ಆಕೆ ಇದಕ್ಕೆ ಸೊಪ್ಪು ಹಾಕಿಲ್ಲ. ಆತನ ಮದುವೆಯ ಭರವಸೆ ಬರೀ ನಾಟಕ ಮತ್ತು ಮೋಸವೆಂದು ಗೊತ್ತಾಗಿದೆ. ನಂತರ ಮನೆಗೆ ವಾಪಸ್ ಕಳಿಸಬೇಕೆಂದು ಒತ್ತಾಯಿದ್ದಾಳೆ.
ನಯಾಜ್ ತನ್ನ ಸ್ನೇಹಿತ ಟಿಪ್ಪು ಎಂಬಾತನ ಜೊತೆ ಆಟೋದಲ್ಲಿ ಕರೆದುಕೊಂಡು ಬರುತ್ತಿದ್ದಾಗ, ಜಟಾಪಟಿ ನಡೆದು ಆಕೆಯನ್ನು ಹೊರದಬ್ಬಿದ್ದಾನೆ. ಹಳ್ಳಕ್ಕೆ ಬಿದ್ದ ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನು ನೋಡಿದ ಸಾರ್ವಜನಿಕರು ಸುಮ್ಮನಿರಬೇಕಲ್ಲ. ಸಿಕ್ಕಿದ್ದೇ ಚಾನ್ಸ್ ಎಂದು, ನಯಾಜ್ ಮತ್ತು ಆತನ ಸ್ನೇಹಿತ ಟಿಪ್ಪುವಿನ ಬಟ್ಟೆ ಹರಿದು, ಮುಖದಲ್ಲಿ ರಕ್ತ ಜಿನುಗುವ ಹಾಗೆ ಬಡಿದಿದ್ದಾರೆ.
ತಾನು ಆಕೆಗೆ ಮೋಸ ಮಾಡಿಲ್ಲ, ವಾಪಸ್ ಬಿಡಲೆಂದು ಕರೆದುಕೊಂಡು ಹೋಗುತ್ತಿದ್ದೆ. ಆಕೆಯೇ ಆಟೋದಿಂದ ಜಿಗಿದಿದ್ದಾಳೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರೂ ಸಾರ್ವಜನಿಕರು ಬಿಟ್ಟಿಲ್ಲ. ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾಜನೀನ್ ಕೂಡ, ನಯಾಜ್ ತನ್ನನ್ನು ಕೊಲ್ಲಲು ಯತ್ನಿಸಿದ ಎಂದು ಆರೋಪಿಸಿದ್ದಾಳೆ. ಆತ ತನ್ನ ಮೇಲೆ ಅತ್ಯಾಚಾರ ನಡೆಸಲು ಕೂಡ ಯತ್ನಿಸಿದ, ಆದರೆ ಯಶಸ್ವಿಯಾಗಲಿಲ್ಲ ಎಂದು ದೂರಿದ್ದಾಳೆ. ಸದ್ಯಕ್ಕೆ ನಯಾಜ್, ಟಿಪ್ಪು ಮತ್ತು ನಾಜನೀನ್ ಕುಂಬಳಗೋಡು ಪೊಲೀಸರ ವಶದಲ್ಲಿದ್ದಾರೆ.












Click it and Unblock the Notifications