ದೆಹಲಿಯಿಂದ ಬಂದಿದ್ದ ಟೆಕ್ಕಿ ದೋಚಿದ ಆಟೋ ಚಾಲಕ

ದೆಹಲಿ ಮೂಲದವರಾದ ಪ್ರತಾಪ್ ಸಿಂಗ್ ನಗರದ ಸಾಫ್ಟವೇರ್ ಕಂಪನಿಗೆ ಕೆಲಸದ ನಿಮಿತ್ತ ಬುಧವಾರ ಆಗಮಿಸಿದ್ದರು. ಶನಿವಾರ ರಜೆ ಇದ್ದ ಕಾರಣ ಸುತ್ತಾಡಲು ಬ್ರಿಗೇಡ್ ರಸ್ತೆಗೆ ಹೋಗಿದ್ದಾರೆ. ನಂತರ ತಡರಾತ್ರಿ ಅಲ್ಲಿಂದ ಮಲ್ಲೇಶ್ ಪಾಳ್ಯಕ್ಕೆ ಹೋಗಲು ಆಟೋ ಹತ್ತಿದ್ದಾರೆ.
ಒಬ್ಬರೇ ಇರುವುದನ್ನು ಕಂಡ ಆಟೋ ಚಾಲಕ ಸ್ನೇಹಿತರ ಸಹಾಯದಿಂದ ಪ್ರತಾಪ್ ಅವರಿಗೆ ಬೆದರಿಸಿ ಅವರ ಬಳಿಇದ್ದ ಹಣ ಮತ್ತು ಒಡವೆ ದೋಚಿದ್ದಾರೆ. ಎಟಿಎಂಗೆ ಬಲವಂತದಿಂದ ಕರೆದುಕೊಂಡು ಹೋಗಿ 9 ಸಾವಿರ ನಗದು ಪಡೆದು, ನಿರ್ಜನ ಪ್ರದೇಶದಲ್ಲಿ ಪ್ರತಾಪ್ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಪ್ರತಾಪ್ ಹೇಳಿದ್ದೇನು : ದರೋಡೆ ಕುರಿತು ಪ್ರತಾಪ್ ಸಿಂಗ್ ಕಾಟನ್ ಪೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಇಬ್ಬರು ನನಗೆ ಬೆದರಿಸಿ ಹಣ, ಮೊಬೈಲ್ ಮತ್ತು ಒಡವೆಗಳನ್ನು ದೋಚಿದ್ದಾರೆ ಎಂದು ಪ್ರತಾಪ್ ಆರೋಪಿಸಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿ ಆಟೋ ಹತ್ತುವ ಮೊದಲೇ ಅದರಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದರು. ಅವರು ಯಾರು ಎಂದು ಪ್ರಶ್ನಿಸಿದೆ. ಆಟೋ ಚಾಲಕ ಹೆದರಬೇಡಿ, ನಾವು ಸ್ನೇಹಿತರು. ಇಬ್ಬರೂ ಮನೆಗೆ ಹೋಗುತ್ತಿದ್ದೇವೆ ಎಂದು ಪ್ರತಾಪ್ ಅವರನ್ನು ಕರೆದುಕೊಂಡು ಹೊರಟಿದ್ದಾರೆ.
ಸ್ವಲ್ಪ ದೂರದ ನಂತರ ಮಾರ್ಗ ಬದಲಿಸಿ ಬೇರೆ ಜಾಗಕ್ಕೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಹಣ ಮತ್ತು ಒಡವೆ ಕಿತ್ತುಕೊಂಡಿದ್ದಾರೆ. ಕಡಿಮೆ ಹಣವಿದ್ದ ಕಾರಣ ಬಲವಂತದಿಂದ ಎಟಿಎಂಗೆ ಕರೆದುಕೊಂಡು ಹೋಗಿ, 9 ಸಾವಿರ ಹಣ ಡ್ರಾಮಾಡಿಸಿ ಪಡೆದುಕೊಂಡಿದ್ದಾರೆ.
ನಂತರ ಕಾಟನ್ ಪೇಟೆ ಸಮೀಪ ಖಾಲಿ ನಿವೇಶನದ ಬಳಿ ಇಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತಾಪ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.












Click it and Unblock the Notifications