ಮೊಬೈಲ್ ಕಳೆದುಕೊಂಡು ಸಾವಿಗೆ ಶರಣಾದ ಗೃಹಿಣಿ

ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಾರುತಿ ನಗರದ ನಿವಾಸಿಯಾಗಿದ್ದ ಮಂಜುಳಾ (30) ಮೃತ ಗೃಹಿಣಿ. ಗುರುವಾರ ಸಂಜೆ ದಾಸರಹಳ್ಳಿಯಲ್ಲಿರುವ ತನ್ನ ತವರು ಮನೆಗೆ ಮಂಜುಳಾ ತೆರಳಿದ್ದರು. ಆಗ 20 ಸಾವಿರ ಬೆಲೆಯ ಮೊಬೈಲ್ ಮತ್ತು 15 ಸಾವಿರ ಹಣ ಕಳೆದುಕೊಂಡಿದ್ದರು.
ಶುಕ್ರವಾರ ಮನೆಗೆ ಆಗಮಿಸಿದ ಅವರು ಹಣ ಮತ್ತು ಮೊಬೈಲ್ ಕಳೆದುಕೊಂಡ ವಿಷಯ ಗಂಡನಿಗೆ ತಿಳಿದರೆ ಬೈಯುತ್ತಾರೆ ಎಂದು ಹೆದರಿ, ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದಾರೆ. ನಂತರ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪತ್ನಿಯ ಮಾತು ಕೇಳಿ ಪತಿ ರಾಮಚಂದ್ರ ತಕ್ಷಣ ಮನೆಗೆ ಧಾವಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಮೃತಪಟ್ಟಿದ್ದಾರೆ.
ಹಿಂದೆ ಹಣ, ಮೊಬೈಲ್ ಕಳೆದುಕೊಂಡಿದ್ದರು : ರಾಮಚಂದ್ರ ಮತ್ತು ಮಂಜುಳಾ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ರಾಮಚಂದ್ರ ಬೆಂಗಳೂರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಗುರುವಾರ ಮಗಳೊಂದಿಗೆ ಮಂಜುಳಾ ದಾಸರಹಳ್ಳಿಯಲ್ಲಿರು ತವರು ಮನೆಗೆ ಹೋಗಿದ್ದರು.
ಮಂಜುಳಾ ಕೆಲವು ದಿನಗಳ ಹಿಂದೆಯೂ 5 ಸಾವಿರ ಬೆಲೆಯ ಮೊಬೈಲ್ ಮತ್ತು ಹಣವನ್ನು ಕಳೆದುಕೊಂಡಿದ್ದರು. ಗುರುವಾರ ಮತ್ತೆ ಮೊಬೈಲ್ ಮತ್ತು ಹಣ ಕಳೆದುಹೋಗಿದ್ದರಿಂದ ಭಯಗೊಂಡು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಂದಿನಿ ಲೇಜೌಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪತಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications