ಪತ್ರಕರ್ತ ಬಿಜೆಪಿ ಶಾಸಕರಿಗಾಗಿ ಶಿಸ್ತು ಸಮಿತಿ

ವಿಧಾನಪರಿಷತ್ ಸದಸ್ಯರಾದ ಲೆಹರ್ ಸಿಂಗ್ ಮತ್ತು ಗೋ.ಮಧುಸೂದನ್ ಅವರು ವರಿಷ್ಠರಿಗೆ 'ರಹಸ್ಯ' ಪತ್ರಗಳನ್ನು ಬರೆದಿದ್ದನ್ನು ಗಮನದಲ್ಲಿಟ್ಟುಕೊಂಡು, ಇಂತಹ ಘಟನೆಗಳು ಮರುಕಳಿಸಿದರೆ, ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಶಿಸ್ತು ಸಮಿತಿ ರಚನೆಯಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ರಘುನಾಥರಾವ್ ಮಲ್ಕಾಪುರೆ ಶಿಸ್ತು ಸಮಿತಿಯ ಸಂಚಾಲಕರಾಗಿದ್ದು, ವಿಧಾನಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ನಾರಾಯಣಸಾ ಬಾಂಡಗೆ, ಶಾಸಕ ಬಿ.ಎನ್.ವಿಜಯ್‌ಕುಮಾರ್ ಮತ್ತು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್ ಸದಸ್ಯರಾಗಿದ್ದಾರೆ.
ಗುರುವಾರ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ನಡೆಸ ರಾಜ್ಯ ಪಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪಕ್ಷದ ನಾಯಕರನ್ನು ದೂರಿ, ಬೆಳವಣಿಗೆಗಳನ್ನು ತಿಳಿಸಿ, ವರಿಷ್ಠ ನಾಯಕರಿಗೆ ಯಾವ ಶಾಸಕರು ಪತ್ರ ಬರೆಯಬಾರದು ಎಂದು ಎಚ್ಚರಿಕೆ ನೀಡಿದರು.
ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಭಿನ್ನಮತವಿದ್ದರೆ, ಪಕ್ಷದ ವೇದಿಕೆಯಲ್ಲೇ ಮಾತುಕತೆ ನಡೆಸಿ ಪರಿಹರಿಸಿಕೊಳ್ಳೋಣ. ನೇರವಾಗಿ ವರಿಷ್ಠರಿಗೆ ಪತ್ರ ಬರೆಯುವುದು ತಪ್ಪು. ಇಂಥ ಅಶಿಸ್ತನ್ನು ಪಕ್ಷ ಸಹಿಸುವುದಿಲ್ಲ. ಆದ್ದರಿಂದ ಶಿಸ್ತು ಸಮಿತಿ ರಚಿಸಲಾಗಿದೆ ಎಂದು ಹೇಳಿದರು. (ಬಿಜೆಪಿಗೆ ಹೊಸ ರೂಪ)
ಮಾಧ್ಯಮಗಳಿಗೆ ಹೇಗೆ ಸಿಗುತ್ತದೆ : ಶಾಸಕರು ಮೊದಲು ವರಿಷ್ಠರಿಗೆ ಪತ್ರ ಬರೆಯುತ್ತಾರೆ. ನಂತರ ಅವುಗಳನ್ನು ಮಾಧ್ಯಮಗಳಿಗೆ ನೀಡುತ್ತೀರಿ. ಪಕ್ಷದ ಬೆಳವಣಿಗೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವುದು ಅಶಿಸ್ತಿನ ವರ್ತನೆ ಎಂದು ತಿಳಿಸಿದರು. (ಯಡಿಯೂರಪ್ಪನ್ನ ವಾಪಸ್ ತನ್ನಿ: ವರಿಷ್ಠರಿಗೆ ಪತ್ರ)
ಶಾಸಕರ ವಿರುದ್ಧ ಏನು ಕ್ರಮ : ಪಕ್ಷ ಶಿಸ್ತು ಉಲ್ಲಂಘಟನೆ ಮಾಡುವ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ನಾಯಕರು ತೀರ್ಮಾನಿಸಲಿದ್ದಾರೆ ಎಂದು ಪಕ್ಷದ ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿಸ್ತು ಸಮಿತಿ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂದು ಮೊದಲು ಶಿಫಾರಸು ಮಾಡಲಿದೆ. ಅವುಗಳ ಆಧಾರದ ಮೇಲೆ, ರಾಜ್ಯಾಧ್ಯಕ್ಷರು ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ವೈಯಕ್ತಿಕ ಅಭಿಪ್ರಾಯ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಬಗ್ಗೆ ಗೋ.ಮಧುಸೂದನ್ ವರಿಷ್ಠರಿಗೆ ಬರೆದಿರುವ ಪತ್ರವು ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ತೀರ್ಮಾನವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸುಸ್ತಾಗಿದ್ದರೆ ಮರಳಲಿ : ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆಯುತ್ತಿಲ್ಲ. ಪಕ್ಷ ಬಿಟ್ಟವರು ಅವರಾಗಿಯೇ ಬಂದರೆ ನಮ್ಮ ಅಭ್ಯಂತರವಿಲ್ಲ. ಪ್ರಾದೇಶಿಕ ಪಕ್ಷ ಕಟ್ಟಿ ಸುಸ್ತಾಗಿದ್ದಾರೆ ವಾಪಸ್ ಬಿಜೆಪಿಗೆ ಮರಳಬಹುದು ಎಂದು ಮಂಜುನಾಥ್ ಲೇವಡಿ ಮಾಡಿದರು.












Click it and Unblock the Notifications