'ನಮೋ' ಭಜನೆಯಲ್ಲಿ ಶಿವಸೇನೆ, ಮೋದಿಗೆ ಜೈ
ಗೋವಾ/ ಮುಂಬೈ, ಜೂ.7: ತಿಂಗಳ ಹಿಂದೆಯಷ್ಟೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ತನ್ನ ಮುಖವಾಣಿ 'ಸಾಮ್ನಾ' ದಲ್ಲಿ ಟೀಕೆ ಟಿಪ್ಪಣಿ ಬರೆದಿದ್ದ ಶಿವಸೇನೆ ಈಗ ನಮೋ ಜಪ ಹಾಡುತ್ತಿರಲು ಕಾರಣವೇನು? ಎನ್ ಡಿಎದಲ್ಲಿ ನಿತೀಶ್ ಕುಮಾರ್ ಅವರನ್ನು ಬೇಕೆಂದೆ ದೂರ ಇಡಲಾಗುತ್ತಿದೆಯೇ? ಮುಂತಾದ ಪ್ರಶ್ನೆಗಳು ಕಡಲ ರಾಜ್ಯ ಗೋವಾದಲ್ಲಿ ಹರಿದಾಡುತ್ತಿದೆ.
ಇಲ್ಲಿ ತನಕ ಪ್ರಧಾನಿ ಹುದ್ದೆಗೆ ಸುಷ್ಮಾ ಸ್ವರಾಜ್ ಬಿಟ್ಟರೆ ಯಾರೂ ಕೂಡಾ ಎನ್ ಡಿಎ ಮೈತ್ರಿಕೂಟದಿಂದ ಪ್ರಧಾನಿ ಹುದ್ದೆಗೆ ಅರ್ಹರಿಲ್ಲ ಎನ್ನುತ್ತಿದ್ದ ಶಿವಸೇನೆ ಈಗ ರಾಗ ಬದಲಾಯಿಸಲು ಕಾರಣ ಏನು ಎಂಬುದು ಬಹುತೇಕ ಸ್ಪಷ್ಟವಾಗಿದೆ.
ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ವೇದಿಕೆ ಮುಖಂಡ ರಾಜ್ ಠಾಕ್ರೆ ನಡುವಿನ ಗೆಳೆತನ ಇನ್ನಷ್ಟು ಗಟ್ಟಿಯಾಗುತ್ತಿರುವುದು ಈ ಎಲ್ಲಾ ಬೆಳವಣಿಗೆ ಕಾರಣ ಎನ್ನಲಾಗಿದೆ. ಹಿಂದುತ್ವ ಪ್ರತಿಪಾದಕ ಶಿವಸೇನೆಗೆ ಈಗ ಮೋದಿ ಪರ ನಿಂತಿದ್ದು, ನಿತೀಶ್ ಕುಮಾರ್ ವಿರುದ್ಧ ತಿರುಗಿ ಬಿದ್ದಿದೆ.

ಆರೆಸ್ಸೆಸ್ ಸಲಹೆ: ಬಿಜೆಪಿಯ ಭವಿಷ್ಯದ ಪ್ರಧಾನಿ ಅಭ್ಯರ್ಥಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಆರ್ ಎಸ್ ಎಸ್ ಸಲಹೆ ಮಾಡಿದೆ.
ಕಡಲ ಕಿನಾರೆ ಗೋವಾದ ರಾಜಧಾನಿ ಪಣಜಿಯಲ್ಲಿ ಆರಂಭವಾಗಿರುವ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯನ್ನು ಮುಂಬರುವ ಲೋಕಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಗೆ ಆರ್ ಎಸ್ ಎಸ್ ನಾಯಕರು ಶಿಫಾರಸು ಮಾಡಿದ್ದಾರೆ.
ಮೋದಿಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಮನವೊಲಿಸುವ ಕಾರ್ಯವನ್ನು ಆರ್ ಎಸ್ ಎಸ್ ಹೆಗಲಿಗೆ ನೀಡಲಾಗಿದೆ.
ಕಳೆದ ರಾತ್ರಿ ರಾಜನಾಥ್ ಸಿಂಗ್ ಮತ್ತು ಆರ್ ಎಸ್ ಎಸ್ ಮುಖಂಡ ಸುರೇಶ್ ಸೋನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನು ಯಾವುದೇ ವೇಳೆ ಲೋಕಸಭೆ ಚುನಾವಣೆ ಎದುರಾಗಬಹುದು. ಇನ್ನು ವಿಳಂಬ ಮಾಡದೆ ಮೋದಿಯನ್ನು ಮುಂಚೂಣಿಗೆ ತರುವಂತೆ ಸಂಘಪರಿವಾರದ ನಾಯಕರು ಸೂಚಿಸಿದ್ದಾರೆ.
ನರೇಂದ್ರಮೋದಿ ಪ್ರಚಾರ ಸಮಿತಿ ಅಧ್ಯಕ್ಷರಾಗಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಅಡ್ವಾಣಿ ಅವರನ್ನು ಆರ್ ಎಸ್ ಎಸ್ ನಾಯಕರು ಮತ್ತು ಪಕ್ಷದ ಹಿರಿಯರು ಮನವೊಲಿಸಲಿದ್ದಾರೆ. ಮೂರು ದಿನಗಳೊಳಗೆ ನಿರ್ಧಾರ ಕೈಗೊಂಡು ಕಾರ್ಯಕಾರಿಣಿ ಸಭೆಯ ಮುಕ್ತಾಯ ಸಮಾರಂಭದಲ್ಲಿ ಅಧಿಕೃತವಾಗಿ ಘೋಷಿಸುವಂತೆ ಒತ್ತಡ ಹಾಕಿದೆ.












Click it and Unblock the Notifications