ಕುಂಟುನೆಪ ಒಡ್ಡಿ ಮೋದಿಯನ್ನು ತಡೆಯಲು ಸಾಧ್ಯವೆ?

ವಿಪರ್ಯಾಸ ನೋಡಿ. ಗೋವಾಕ್ಕೆ ಬಂದವರಿಗಿಂತ ಬರದಿರುವವರ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆರೋಗ್ಯದ ಕಾರಣ ನೀಡಿ ಲಾಲ್ ಕೃಷ್ಣ ಅಡ್ವಾಣಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಿರುವ ಉಮಾ ಭಾರತಿ ಕೂಡ ಅನಾರೋಗ್ಯದ ಕಾರಣವೊಡ್ಡಿ ಕಾರ್ಯಕಾರಣಿಗೆ ಬರದೆ ತಪ್ಪಿಸಿಕೊಂಡಿರುವುದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಅನಾರೋಗ್ಯದ ಕುಂಟುನೆಪವೊಡ್ಡಿ ಸಾಧ್ಯವಾಗುವುದನ್ನು ಅಸಾಧ್ಯವಾಗಿಸಲು ಸಾಧ್ಯವೆ? ಬಿಜೆಪಿಯ ನಾಯಕರು ಯಾಕೆ ದಿಟ್ಟತನವನ್ನು ತೋರಿಸುತ್ತಿಲ್ಲ? ಉಳಿದ ಹಿರಿಯ ನಾಯಕರು ಪ್ರಧಾನಿ ಅಭ್ಯರ್ಥಿ ನೇಮಕಾತಿ ವಿಷಯದಲ್ಲಿ ಏಕೆ ಹಿಂದೇಟು ಹಾಕುತ್ತಿದ್ದಾರೆ? ಅನೇಕ ಹಗರಣಗಳಲ್ಲಿ ಭಾಗಿಯಾಗಿರುವ ಯುಪಿಎ ಸರಕಾರ ಕೂಡ ಬಿಜೆಪಿಯ ದೌರ್ಬಲ್ಯವನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ.
ಲೋಕಸಭೆ ಹತ್ತಿರದಲ್ಲಿ ಇರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶಿಸಬೇಕಾಗಿತ್ತು. ಆಡಳಿತ ಪಕ್ಷ ಯುಪಿಎ ಮತ್ತು ಇತರ ಪಕ್ಷಗಳಿಗೆ ಮತ್ತು ದೇಶದ ಜನತೆಗೆ ಸ್ಪಷ್ಟ ಸಂದೇಶ ರವಾನಿಸಬೇಕಾಗಿತ್ತು. ಶಾಲೆಗೆ ಹಾಜರಾಗದಿರಲು ಮಕ್ಕಳು ಅನಾರೋಗ್ಯದ ಕುಂಟುನೆಪ ಹೇಳಿದಂತೆ ಬಿಜೆಪಿಯ ಹಿರಿಯ ನಾಯಕರು ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಅಡ್ವಾಣಿಗಿಂತ ಮೋದಿಯೆಡೆಗೆ ಹೆಚ್ಚಿನ ಒಲವು ಅನೇಕ ನಾಯಕರು ತೋರುತ್ತಿರುವುದು ಈ 'ಅನಾರೋಗ್ಯ'ಕ್ಕೆ ಕಾರಣವೆ? ಕರ್ನಾಟಕ ಬಿಜೆಪಿ ಕೂಡ ತನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆರಿಸಿ ದಿಟ್ಟತನ ತೋರಿದೆ. ಇದು ಕೆಲ ಹಿರಿಯ ನಾಯಕರ ಇರುಸುಮುರುಸಿಗೂ ಕಾರಣವಾಗಿದೆ.
ಆರೋಗ್ಯ ಸರಿಯಿಲ್ಲದ ಕಾರಣ ತಾವು ಬಿಜೆಪಿ ಕಾರ್ಯಕಾರಣಿಗೆ ಬರುತ್ತಿಲ್ಲವೆಂದು ಉಮಾ ಭಾರತಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಅಡ್ವಾಣಿ ಅವರು ಶನಿವಾರ ಕಾರ್ಯಕಾರಣಿಗೆ ಬರುವ ಸಾಧ್ಯತೆಯಿದೆ.
ಈ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷದ ರಣತಂತ್ರದ ಬಗ್ಗೆ ಚರ್ಚೆ ನಡೆಯಲಿದೆ. ಹಾಗೆಯೆ, ಚುನಾವಣಾ ಪ್ರಚಾರದ ಮುಂದಾಳತ್ವವನ್ನು ಯಾರು ವಹಿಸುತ್ತಾರೆ ಎಂಬ ಬಗ್ಗೆಯೂ ತೀರ್ಮಾನವಾಗುವ ಸಾಧ್ಯತೆಯಿದೆ. ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತಿತರ ಹಿರಿಯ ನಾಯಕರು ಇದೇ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ಆರ್‌ಎಸ್ಎಸ್ ಕೂಡ ತನ್ನ ಸಹಮತ ವ್ಯಕ್ತಪಡಿಸಿದೆ.
ಆದರೆ, ಲಾಲ್ ಕೃಷ್ಣ ಅಡ್ವಾಣಿಯೇ ಅಡ್ಡಗಾಲು ಹಾಕುತ್ತಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲೇ ಗುಜರಾತ್ ಅಭಿವೃದ್ಧಿ ಹೊಂದಿತ್ತು. ಗುಜರಾತ್ ಅಭಿವೃದ್ಧಿಯ ಹರಿಕಾರ ಮೋದಿ ಅಲ್ಲವೇ ಅಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಅಡ್ವಾಣಿಗೆ ಬೆಂಬಲವಾಗಿ ನಿಂತಿರುವ ಉಮಾ ಭಾರತಿ, ತಾವೇನು ಹೇಳಿಕೆ ನೀಡಿದರೂ ಅದನ್ನು ಮಾಧ್ಯಮಗಳು ವಿಪರೀತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದರಿಂದ ಸೂಕ್ತ ವೇದಿಕೆಯಲ್ಲಿ ತಮ್ಮ ಹೇಳಿಕೆ ನೀಡುವುದಾಗಿ ನುಡಿದಿದ್ದಾರೆ.
ಇಂದು ನಡೆಯುತ್ತಿರುವ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸಂಸದೀಯ ಮಂಡಳಿಯ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಹಿರಿಯ ನಾಯಕು ಭಾಗಿಯಾಗುತ್ತಿದ್ದಾರೆ. ಅಡ್ವಾಣಿಯವರು ವಿಶೇಷ ವಿಮಾನದ ಮುಖಾಂತರ ಶನಿವಾರ ಗೋವಾಗೆ ತೆರಳಲಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಒತ್ತಾಯಕ್ಕೆ ಅಡ್ವಾಣಿ ಮಣಿಯುತ್ತಾರಾ ಅಥವಾ ತಮ್ಮ ಹಠಕ್ಕೆ ಜೋತುಬೀಳುತ್ತಾರಾ?












Click it and Unblock the Notifications