ಇನ್ನಷ್ಟು ಅಧಿಕಾರಿಗಳಿಗೆ ಗಣಿ ಧೂಳು ತಿನ್ನಿಸಿದ ಸಿಬಿಐ

ಅಕ್ರಮ ಗಣಿಗಾರಿಕೆ, ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಗಳಲ್ಲಿ ಸಿಬಿಐ ಪೊಲೀಸರಿಂದ ಬಂಧಿತರಾಗಿರುವ ಅಧಿಕಾರಿಗಳ ಸಂಖ್ಯೆ ಆರಕ್ಕೇರಿದೆ. ಹಿಂದೆ ಸಿಬಿಐ ಬಂಧಿಸಿರುವ ನಾಲ್ವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿತ ಆರೋಪಿಗಳು ಈ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಹಕಾರ ನೀಡಿರುವುದು ಸಾಬೀತಾಗಿದೆ.
ಬಳ್ಳಾರಿಯ ದೋಣಿಮಲೈ ಪ್ರದೇಶದಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್ ಎಂಡಿಸಿ) ಗುತ್ತಿಗೆ ಪ್ರದೇಶದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ಗಣಿ ಕಂಪೆನಿ ನಡೆಸಿದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎನ್. ವಿಶ್ವನಾಥನ್ ಸೇರಿದಂತೆ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಲಾಗಿದೆ. ಆರೋಪಿಗಳನ್ನು 8 ದಿನಗಳ ಸಿಬಿಐ ಕಸ್ಟಡಿಗೆ ನ್ಯಾಯಲಯ ಒಪ್ಪಿಸಿದೆ.
ಬಂಧಿತರಲ್ಲಿ ಗಣಿ ಕಂಪೆನಿ ಮಾಲೀಕ ರಾಜೇಂದ್ರ ಜೈನ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿತೇಶ್ ಜೈನ್ ಮತ್ತು ಸಂಡೂರಿನ ಹಿಂದಿನ ಪೊಲೀಸ್ ಇನ್ ಸ್ಪೆಕ್ಟರ್ ಎಚ್.ರಮಾಕಾಂತ್ ಸೇರಿದ್ದಾರೆ.
ಭಾರಿ ನಷ್ಟ: 1999ರಿಂದ 2010ರವರೆಗೂ ಎನ್ ಎಂಡಿಸಿ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಈ ಅವಧಿಯಲ್ಲಿ 60 ಲಕ್ಷ ಟನ್ ಕಬ್ಬಿಣದ ಅದಿರನ್ನು ಎನ್ ಎಂಡಿಸಿ ಗುತ್ತಿಗೆ ಪ್ರದೇಶದಿಂದ ಡಿಎಂಎಸ್ ಕಳ್ಳಸಾಗಣೆ ಮಾಡಿದೆ. ಇದರಿಂದ ಸುಮಾರು 1,200 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಸುಪ್ರೀಂಕೋರ್ಟ್, ಡಿಎಂಎಸ್ ವಿರುದ್ಧ 2011ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು.
ಸಂಡೂರು ಸರ್ಕಲ್ ಇನ್ಸ್ ಪೆಕ್ಟರ್ ರಮಾಕಾಂತ್ ಅವರು ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪ ಕೂಡಾ ಕೇಳಿ ಬಂದಿದೆ. ತಿಂಗಳಿಗೆ 10-15 ಲಕ್ಷ ರು ಲಂಚ ರಮಾಕಾಂತ್ ಕೈ ಸೇರುತ್ತಿತ್ತು ಎನ್ನಲಾಗಿದೆ.
ಐಪಿಸಿ ಸೆಕ್ಷನ್ 120(ಬಿ), 379,420,406,409,421,447,468,471 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಕರ್ನಾಟಕ ಅರಣ್ಯ ಕಾಯ್ದೆ 1963,1969, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ರ ಕಲಂ 9, 11,13(ಡಿ) ಮತ್ತು 13(2) ಅಡಿಯಲ್ಲಿ ಆರೋಪಿಗಳ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.












Click it and Unblock the Notifications