ಮುಜರಾಯಿ ಪತ್ರಿಕೆ ಸಂಪಾದಕರ ಜೊತೆ ಸಂದರ್ಶನ

ಮುಜರಾಯಿ ಎನ್ನುವ ಪದಕ್ಕೆ ಬಹುಷಃ ಅಂದು ವಿರೋಧ ಪಕ್ಷದ ನಾಯಕನಾಗಿ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಅವರಿಂದ ಇನ್ನಷ್ಟು ಜನಪ್ರಿಯತೆ ಬಂತು ಅಂದರೆ ತಪ್ಪಾಗಲಾರದು. ಉಡುಪಿ ಕೃಷ್ಣ ಮಠವನ್ನು 'ಮುಜರಾಯಿ ಇಲಾಖೆ' ವ್ಯಾಪ್ತಿಗೆ ತರುತ್ತೇನೆ ಎಂದು ಸಿದ್ದು ಹೇಳಿಕೆಯ ನಂತರ ಮುಜರಾಯಿ, ಧಾರ್ಮಿಕ ದತ್ತಿ ಇಲಾಖೆಗಳು ಸಾರ್ವಜನಿಕರ ಬಾಯಲ್ಲಿ, ಮಾಧ್ಯಮದಲ್ಲಿ ಹೆಚ್ಚು ಹೆಚ್ಚು ಬಳಕೆಯಾಗಲಾರಂಭಿಸಿತು.

ಸುಮಾರು ಇಪ್ಪತ್ತು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದದ್ದು 'ಮುಜರಾಯಿ' ಎನ್ನುವ ಪತ್ರಿಕೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಅಭಿವೃದ್ಧಿ ಕಾಣದ ರಾಜ್ಯದ ದೇವಾಲಯಗಳು, ದೇವರ ದುಡ್ಡನ್ನೇ ಮುಂಡಾಯಿಸುವ ನುಂಗಣ್ಣರು ಮುಂತಾದ ಹತ್ತು ಹಲವಾರು ಹಿಂದೂ ದೇವಾಲಯಗಳ ಸಮಸ್ಯೆ ಪರಿಹಾರಕ್ಕೆ ಪತ್ರಿಕೋಧ್ಯಮದ ಮೂಲಕ ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಸ್ತುನಿಷ್ಠ ಸಂದೇಶ ರವಾನಿಸುವ ಸಲುವಾಗಿ ಬಿ ಎಲ್ ರಾಜಗೋಪಾಲಚಾರ್ ಈ ಪತ್ರಿಕೆಯನ್ನು ಹುಟ್ಟುಹಾಕಿದರು. ಅವರ ಈ ಜವಾಬ್ದಾರಿಯುತ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತಾ, ಅವರ ಜೊತೆ ನಡೆಸಿದ ಚುಟುಕು ಸಂದರ್ಶನದ ಆಯ್ದ ಭಾಗ ಇಂತಿದೆ.

ಪ್ರ: ಮುಜರಾಯಿ ಪತ್ರಿಕೆ ಅಸ್ಥಿತ್ವಕ್ಕೆ ಬಂದಿದ್ದು ಯಾವತ್ತು?
ಆಚಾರ್: 2010 ಡಿಸೆಂಬರ್, 1 ತಾರೀಖು

Muzrai Weekly paper Editor interview

ಪ್ರ: ಪತ್ರಿಕೆ ಸ್ಥಾಪನೆಯ ಹಿಂದಿನ ಉದ್ದೇಶ?
ಆಚಾರ್: 1947 ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ದೇವಾಲಯಗಳು ಅಭಿವೃದ್ಧಿ ಕಾಣಲಿಲ್ಲ, ದೇವಾಲಯಗಳು ಪಡೆದುಕೊಂಡಿದ್ದಕ್ಕಿಂತ ಕಳೆದು ಕೊಂಡದ್ದೆ ಹೆಚ್ಚು, ಬ್ರಿಟಿಷರ ಕಾಲದಲ್ಲಿ ವಿದೇಶಿಯವರ ದಾಳಿಗೆ ತುತ್ತಾಗಿ ಧ್ವಂಸ ಮಾಡಿ ದೇವಾಲಯಗಳಲ್ಲಿನ ನಿಧಿ ದೋಚಿದರು. ನಮ್ಮ ಹಿಂದೂ ಸಮಾಜವು ತಲೆ ತಗ್ಗಿಸುವಂತಾಯಿತು. ಇನ್ನು ಹೆಸರಾಂತ ದೇವಾಲಯಗಳಲ್ಲಿ ಆದಾಯ ತಂದು ಕೊಡುತ್ತಿರುವ ದೇವಾಲಯಗಳು ಕೆಲವು ಪ್ರತಿಷ್ಠಿತರ ಕಪಿ ಮುಷ್ಠಿಯಲ್ಲಿ ಸಿಲುಕಿ ಸಾರ್ವಜನಿಕರ ಹಣ ವ್ಯಯವಾಗುತ್ತಿರುವುದು ಪತ್ರಿಕಾ ಸಂಪಾದಕನಾದ ನನ್ನ ಗಮನಕ್ಕೆ ಬಂದಿದ್ದು, ಅದನ್ನು ತಡೆಯುವ ಉದ್ದೇಶ ಮತ್ತು ಅಭಿವೃದ್ಧಿಯ ನೆಪದಲ್ಲಿ ಕೋಟಿ ಕೋಟಿ ಹಣ ಪೋಲಾಗುವುದನ್ನು ತಡೆದು ಸಾರ್ವಜನಿಕರ ಗಮನಕ್ಕೆ ಮತ್ತು ಸರಕಾರದ ಗಮನಕ್ಕೆ ತಂದು ಇವುಗಳನ್ನು ರಕ್ಷಿಸುವ ಉದ್ದೇಶದಿಂದ ಈ ಪತ್ರಿಕೆ ಹುಟ್ಟುಹಾಕಿದ್ದೇನೆ.

ಪ್ರ: ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲಾ ದೇವಾಲಯಗಳ ಸಂಪರ್ಕದಲ್ಲಿದ್ದೀರಾ?
ಆಚಾರ್: ಕಳೆದ ಮೂರು ವರ್ಷದಿಂದ ಕೇವಲ ಶೇ.25ರಷ್ಟು ಮಾತ್ರ ಸಂಪರ್ಕ ಸಾಧಿಸಲಾಗಿದೆ. ಎಲ್ಲಾ ದೇವಾಲಯಗಳನ್ನು ಸಂಪರ್ಕಿಸಲು ಇನ್ನೂ ಸಾಧ್ಯವಾಗಲಿಲ್ಲ. ಮುಜರಾಯಿ ಇಲಾಖೆ ಕೇಂದ್ರ ಕಛೇರಿಯಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇನ್ನುಳಿದಂತೆ ರಾಜ್ಯದಲ್ಲಿ 34,266 ದೇವಾಲಯಗಳಿದ್ದು, ಇವುಗಳಲ್ಲಿ ಕೇವಲ 125 ದೇವಾಲಯಗಳು 'ಎ' ದರ್ಜೆಯ ದೇವಾಲಯಗಳಾಗಿದ್ದು, 179 ದೇವಾಲಯಗಳು 'ಬಿ' ದೇವಾಲಯಗಳು. ಇನ್ನು ಉಳಿದ 33,962 ದೇವಾಲಯಗಳನ್ನು 'ಸಿ' ದರ್ಜೆಯ ದೇವಾಲಯಗಳು ಎಂದು ಪರಿಗಣಿಸಲಾಗಿದೆ. 'ಎ' ದರ್ಜೆಯ ದೇವಾಲಯಗಳೆಂದರೆ ವಾರ್ಷಿಕ ರೂ.20.00 ಲಕ್ಷಕ್ಕೂ ಹೆಚ್ಚು ಆದಾಯವಿರುವ ದೇವಾಲಯಗಳು, 'ಬಿ' ದರ್ಜೆಯ ದೇವಾಲಯಗಳು ರೂ.10.00 ಲಕ್ಷಕ್ಕೂ ಹೆಚ್ಚು ಆದಾಯವಿರುವ ದೇವಾಲಯಗಳು, 'ಸಿ' ದರ್ಜೆಯ ದೇವಾಲಯಗಳು ರೂ.1.00 ರಿಂದ 10.00 ಲಕ್ಷಕ್ಕೂ ಕಡಿಮೆ ಆದಾಯವಿರುವ ದೇವಾಲಯಗಳು. ಇದರಲ್ಲಿ 'ಸಿ' ದರ್ಜೆಯ ದೇವಾಲಯಗಳು ಸ್ಥಳೀಯರ ಮತ್ತು ರಾಜಕೀಯ ಮುಖಂಡರ ಕಪಿಮುಷ್ಠಿಯಲ್ಲಿವೆ. ಇಂಥಹ ದೇವಾಲಯಗಳಲ್ಲಿ ಸರ್ಕಾರ ವಿಶೇಷ ಮುಜರಾಯಿ ಅಧಿಕಾರಿಗಳನ್ನು ನೇಮಕ ಮಾಡಿ ಆ ದೇವಾಲಯಗಳ ಸಂಪೂರ್ಣ ವಿವರಗಳನ್ನು ದಾಖಲಿಸಬೇಕು. ಇದು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ನನ್ನ ಸಂಪಾದಕತ್ವದಲ್ಲಿ ಮುಜರಾಯಿ ಪತ್ರಿಕೆಯನ್ನು ಹೊರ ತಂದು ಸಮಾಜದಲ್ಲಿ ದೇವಾಲಯಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದ್ದೇನೆ, ಮತ್ತು ದೂರದ ಊರುಗಳಿಗೆ ನನ್ನ ಪತ್ರಿಕೆಯನ್ನು ಉಚಿತವಾಗಿ ಕಳುಹಿಸುತ್ತಿದ್ದೇನೆ.

ಪ್ರ: ಈ ದೇವಾಲಯಗಳಿಗೆ ಸಂಬಂಧಪಟ್ಟ ಮಾಹಿತಿ ನಿಮ್ಮಲ್ಲಿದೆಯೇ?
ಆಚಾರ್: ಇದೊಂದು ಬಹಳ ಆಶ್ಚರ್ಯದ ಪ್ರಶ್ನೆ. ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳು ಎಷ್ಟು ಎಲ್ಲೆಲ್ಲಿವೆ ಎಂಬ ಕುತೂಹಲದಿಂದ ಮಾಹಿತಿ ಕೇಳಿದಾಗ ಇಲಾಖೆಯಿಂದ ದೊರೆಯಲಿಲ್ಲ. ಸರ್ಕಾರದಲ್ಲಿ ಮುಜರಾಯಿ ಖಾತೆ ಸಚಿವರು ಇದ್ದಾರೆ. ಮುಜರಾಯಿ ಇಲಾಖೆಯು ಸಹ ಹಿಂದು ಧಾರ್ಮಿಕ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಂತೆ ರಾಜ್ಯದ ದೇವಾಲಯಗಳನ್ನು ನಿರ್ವಹಿಸುತ್ತಿರುತ್ತವೆ. ಇಂತಹ ಇಲಾಖೆಯಲ್ಲಿ ದೇವಾಲಯಗಳ ಸಂಪೂರ್ಣ ಮಾಹಿತಿ ಲಭ್ಯವಿಲ್ಲ. ಇಲಾಖೆಯ ಮಾಹಿತಿ ಪ್ರಕಾರ 34,266 ದೇವಾಲಯಗಳು ಇದ್ದು, ರಾಜ್ಯದಲ್ಲಿ 1.00 ಲಕ್ಷಕ್ಕೂ ಹೆಚ್ಚು ಪುರಾತನ ದೇವಾಲಯಗಳು ಇದ್ದು 34,266 ದೇವಾಲಯಗಳನ್ನು ಹೊರತು ಪಡಿಸಿ ಉಳಿದ ದೇವಾಲಯಗಳು ಪ್ರತಿಷ್ಠಿತ ವ್ಯಕ್ತಿಗಳು ಅಥವಾ ಪ್ರಭಾವಿ ರಾಜಕಾರಣಿಗಳು, ಪ್ರತಿಷ್ಠಿತ ಮಠಾಧೀಶರ ವಶದಲ್ಲಿವೆ.

ಪ್ರ: ದೇವಾಲಯದ ಆದಾಯಕ್ಕೆ ಸಂಬಂಧಪಟ್ಟಂತೆ ನಿಮಗೆ ಸಿಗುವ ಮಾಹಿತಿ ನಿಮಗೆ ಎಷ್ಠರ ಮಟ್ಟಿಗೆ ಕರಾರುವಕ್ಕಾಗಿರುತ್ತದೆ?
ಆಚಾರ್: ದೇವಾಲಯದ ಆದಾಯ ದರ ನಿಗದಿಗೊಳಿಸಿ ಪಡೆಯುವಂತಹದಲ್ಲ. ದೇವಾಲಯಗಳಲ್ಲಿ ದೇಣಿಗೆ ಸಂಗ್ರಹಿಸಲು ಗುಪ್ತ ದೇಣಿಗೆ ಸಂಗ್ರಹ ಪೆಟ್ಟಿಗೆ ಎಂಬ ದೇವಾಲಯದ ಹುಂಡಿಯನ್ನು ಅಳವಡಿಸಿರುತ್ತಾರೆ. ಆ ಪೆಟ್ಟಿಗೆಯ ಮೂಲಕ ದೇಣಿಗೆ ನೀಡುವ ಭಕ್ತರು ಗುಪ್ತವಾಗಿ ಹಣದ ರೂಪದಲ್ಲಿ ಅಥವಾ ಇನ್ನಿತರ ರೂಪಾದಲ್ಲಿ ನೀಡುತ್ತಾರೆ. ಆ ಗುಪ್ತ ಪೆಟ್ಟಿಗೆಯನ್ನು ತೆರೆಯುವಾಗ ದೇವಾಲಯದ ಸಿಬ್ಬಂದಿ ಮತ್ತು ಒಬ್ಬ ಮುಜರಾಯಿ ಅಧಿಕಾರಿ ಅಥವಾ ಕಂದಾಯ ಇಲಾಖೆಯ ಅಧಿಕಾರಿ ಪೋಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಹುಂಡಿಯನ್ನು ತೆಗೆಯುತ್ತಾರೆ. ಅಲ್ಲಿರುವ ಅಧಿಕಾರಿಗಳು ಪ್ರಾಮಾಣೀಕರಾಗಿದ್ದರೆ ಹುಂಡಿಯ ಎಲ್ಲಾ ಹಣವು ದೇವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಪ್ರ: ನಿಮ್ಮ ಪತ್ರಿಕೆ ಸರ್ಕಿಲೇಷನ್ ಎಷ್ಟಿದೆ?
ಆಚಾರ್: ನನ್ನ ಮುಜರಾಯಿ ಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಬಹುವರ್ಣ ಮುದ್ರಣದ 2,000 ಪ್ರತಿಗಳು ಮುದ್ರಣವಾಗಿತ್ತು. ಈಗ ಕಪ್ಪು-ಬಿಳುಪು 5,000 ಪ್ರತಿಗಳು ಮುದ್ರಣ ಮಾಡುತ್ತಿದ್ದೇನೆ, ಮತ್ತು ಉಚಿತವಾಗಿ ಹಂಚುತ್ತಿದ್ದೇನೆ.

ಪ್ರ: ಮುಜರಾಯಿ ಪತ್ರಿಕೆ ಎಂದರೇನು? ಏಕೆ ಬೇಕು?
ಆಚಾರ್: ಮುಜರಾಯಿ ಪತ್ರಿಕೆ ಎಂಬುದು ಒಂದು ಧಾರ್ಮಿಕ ಪತ್ರಿಕೆ. ಯಾವುದೇ ದೇವಾಲಯದ ಜಾತ್ರೆ , ಪೂಜೆ ರಥೋತ್ಸವಗಳನ್ನು ವೈಭವೀಕರಿಸುವುದಿಲ್ಲ. ಏಕೆಂದರೆ, ಈಗ ಸಾಕಷ್ಟು ಮಾಧ್ಯಮಗಳು ವೈಭವೀಕರಣಕ್ಕೆಂದೇ ಬೆಳಿಗ್ಗೆ 6 ರಿಂದ 8ರ ವರೆಗೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಇಂತಹ ವಿಚಾರಗಳ ಬಗ್ಗೆ ಸಾರ್ವಜನಿಕರು ನಮ್ಮ ಪತ್ರಿಕೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ನಾವೇ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದೇನೆ.

ಪ್ರ: ಈ ಪತ್ರಿಕೆಯನ್ನು ಯಾರು ಕೊಳ್ಳುತ್ತಾರೆ? ಓದುಗರು ಯಾರು?
ಆಚಾರ್: ಮುಜರಾಯಿ ಪತ್ರಿಕೆ ಕೇವಲ ಧಾರ್ಮಿಕ ಪತ್ರಿಕೆ, ಅದರಲ್ಲೂ ವ್ಯಕ್ತಿಗತವಾಗಿಯಾಗಲೀ, ರಾಜಕೀಯವಾಗಿಯಾಗಲಿ, ವೈಯಕ್ತಿಕವಾಗಿಯಾಗಿಯಾಗಲೀ ಯಾರನ್ನೂ ತೇಜೋವಧೆ ಮಾಡದೆ ದೇವಾಲಯಗಳಿಗೆ ಮಾತ್ರ ಸೀಮಿತವಾದ ಪತ್ರಿಕೆ ಆದ್ದರಿಂದ ಯಾರೂ ಅಂಗಡಿಗಳಲ್ಲಿ ಹಣ ಕೊಟ್ಟು ಕೊಂಡು ಓದುವುದಿಲ್ಲ. ರಾಜ್ಯದಲ್ಲಿ 1.00 ಲಕ್ಷಕ್ಕಿಂತ ಹೆಚ್ಚು ಪುರಾತನ ದೇವಾಲಯಗಳು, 2.00 ಲಕ್ಷಕ್ಕೂ ಹೆಚ್ಚು ಖಾಸಗಿ ದೇವಾಲಯಗಳಿದ್ದು, ಕೋಟ್ಯಾಂತರ ಆಸ್ತಿಕರು ಇದ್ದಾರೆ. ಆದರೆ ಎಲ್ಲರಿಗೂ ಉಚಿತವಾಗಿ ಪತ್ರಿಕೆ ನೀಡಲು ಸಾಧ್ಯವಿಲ್ಲ. ಪತ್ರಿಕೆಯು ಯಾವುದೇ ಮುಲಾಜಿಗೆ ಒಳಗಾಗಿರುವುದಿಲ್ಲ. ಮತ್ತು ಯಾರನ್ನು ದ್ವೇಷಿಸಿ ತೇಜೋವಧೆ ಮಾಡಿಲ್ಲ. ವಸ್ತುನಿಷ್ಠ ವರದಿಗಳನ್ನಷ್ಠೆ ಪ್ರಕಟಿಸುತ್ತಿದೆ. ಇಲಾಖೆಯೂ ಸಹ ಕೆಲವು ವರದಿಗಳನ್ನು ಮೊದಮೊದಲು ನಿರಾಕರಿಸಿ ಘಟನೆಗಳು ನಡೆದ ಮೇಲೆ ಎಚ್ಚೆತ್ತುಕೊಂಡ ಉದಾಹರಣೆಗಳಿವೆ. ಪತ್ರಿಕೆಯು ನಿಧಾನವಾಗಿ ಆಸ್ತಿಕರನ್ನು ಇಲಾಖಾಧಿಕಾರಿಗಳ ಮತ್ತು ದೇವಾಲಯಗಳ ಸಿಬ್ಬಂದಿಗಳ ಮನ ಮುಟ್ಟುತ್ತಿ ದೆ. ಪತ್ರಿಕೆಯನ್ನು ಯಾರು ಕೊಳ್ಳುತ್ತಾರೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಸಾರ್ವಜನಿಕರು ಮತ್ತು ಇಲಾಖೆಯ ಅಧಿಕಾರಿಗಳಲ್ಲಿ ಅರಿವು ಮೂಡಿಸುವುದೇ ನಮ್ಮ ಗುರಿ.

ಪ್ರ: ಪುಟ ಎಷ್ಟು? ಬೆಲೆ ಎಷ್ಟು? ಚಂದದಾರಾಗುವುದು ಹೇಗೆ?
ಆಚಾರ್: ಮುಜರಾಯಿ ಪತ್ರಿಕೆ 12 ಪುಟ ಹೊಂದಿದ್ದು, ಬೆಲೆ 12 ರೂಪಾಯಿ. ಕೇವಲ ಗೌರವ ಸದಸ್ಯರನ್ನು ಮಾತ್ರ ಚಂದಾದರಾರನ್ನಾಗಿ ಸ್ವೀಕರಿಸುತ್ತಿದ್ದೇನೆ. ನನ್ನ ದೂರವಾಣಿ ಸಂಖ್ಯೆ : +91 97411-55370.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+