ಹೆಚ್ಡಿಕೆ ಗೆಜ್ಜೆ ಸದ್ದಿಗೆ ಯಾರು ಹೆದರೋಲ್ಲಾ : ವಿಶ್ವನಾಥ್

ಮೈಸೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ವಿಶ್ವನಾಥ್ , "ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕುಮಾರಣ್ಣ ನಿನ್ನ ಕುಣಿಮಿಣಿ ಗೆಜ್ಜೆಗೆ ಹೆದುರುತ್ತೀವಾ" ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದರು.
ತಮಗೆ ಪ್ರತಿಪಕ್ಷ ನಾಯಕ ಸ್ಥಾನ ತಪ್ಪಿಸಲು ಕಾಂಗ್ರೆಸ್ 'ಆಪರೇಷನ್ ಹಸ್ತ' ನಡೆಸಲು ಮುಂದಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ವಿಶ್ವನಾಥ್, ಜನರು ಅಧಿಕಾರ ನಡೆಸಲು ಸ್ಪಷ್ಟ ಬಹುಮತ ನೀಡಿದ್ದಾರೆ. ಕುಮಾರಸ್ವಾಮಿಗೆ ನಾವು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಹೆಚ್ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ದೊಡ್ಡ ನಾಯಕ ಎಂದು ತಿಳಿದುಕೊಂಡಿದ್ದಾರೆ. "ತನ್ನ ಹುಂಜ ಕೂಗದಿದ್ದರೆ ಊರು ಬೆಳಕಾಗದೆಂಬ ಭ್ರಮೆಯಲ್ಲಿದ್ದ ಸೋಮನಹಳ್ಳಿ ಮುದುಕಿಯಂತೆ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ" ಎಂದು ಕುಟುಕಿದರು.
ಆಪರೇಷನ್ ಹಸ್ತದ ವಿಷಯವನ್ನು ಗಾಳಿಯಲ್ಲಿ ಕುಮಾರಸ್ವಾಮಿ ಹಾರಿಬಿಟ್ಟು, ರಾಜಕೀಯ ಅನುಕಂಪ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮುಂತಾದ ಪ್ರತಿಪಕ್ಷ ನಾಯಕರಿಗೆ ನಾವು ಹೆದರುವುದಿಲ್ಲ ಎಂದು ಘೋಷಿಸಿದರು.
ಗೊಂದಲ ಬೇಡ : ರಾಜ್ಯದ ಅಭಿವೃದ್ಧಿ ಮಾಡಲಿ ಎಂದು ಜನರು ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ತಮ್ಮನ್ನು ಮಂತ್ರಿ ಮಾಡಿಲ್ಲ, ತಮಗೆ ಆ ಖಾತೆ ಕೊಡಿ ಎಂದು ಜನರಲ್ಲಿ ಗೊಂದಲ ಮೂಡಿಸಿದೆ ಅಚ್ಚುಕಟ್ಟಾಗಿ ಆಡಳಿತ ನಡೆಸಿ ಎಂದು ವಿಶ್ವನಾಥ್ ಶಾಸಕರಿಗೆ ಕಿವಿಮಾತು ಹೇಳಿದರು.
ಶಾಸಕರಿಗೆ ಅಧ್ಯಕ್ಷ ಸ್ಥಾನ ಬೇಡ : ನಿಗಮ ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಡಿ ಎಂದು ಪಕ್ಷದ ನಾಯಕರಿಗೆ ವಿಶ್ವನಾಥ್ ಸಲಹೆ ನೀಡಿದರು. ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಿ ಅಧ್ಯಕ್ಷ ಸ್ಥಾನ ನೀಡಿ ಶಾಸಕರು ನಿಗಮ ಮಂಡಳಿಗಳ ಅಧಿಕಾರ ವಹಿಸಿಕೊಳ್ಳುವುದು ಬೇಡ ಎಂದರು.












Click it and Unblock the Notifications