ಬಿಲ್ಲವರ ಸಮಾರಂಭದಲ್ಲಿ ಸಚಿವ ಸೊರಕೆ ಹೇಳಿದ್ದೇನು?
ಉಡುಪಿ, ಜೂ 3: ನನಗೆ ಇಂದು ಏನು ಅಧಿಕಾರ ಸಿಕ್ಕಿದೆಯೋ ಅದು ಕಾಪು ಕ್ಷೇತ್ರದ ಜನತೆಯಿಂದ. ನಾನೀಗ ಕಾಪು ಕ್ಷೇತ್ರದ ಶಾಸಕ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ನಗಾರಭಿವೃದ್ದಿ ಸಚಿವ. ಸತ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕೋಟಿ ಮತ್ತು ಚೆನ್ನಯ್ಯರು ವಿಶ್ವಮಾನವತೆಯ ಎರಡು ಕಣ್ಣುಗಳು ಎಂದು ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಭಾನುವಾರ (ಜೂ 2) ಕಾಪುವಿನಲ್ಲಿ ಬಿಲ್ಲವ ಸಮಾಜದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸೊರಕೆ, ಕೋಟಿ - ಚೆನ್ನಯ್ಯರು ಬಿಲ್ಲವರ ಕುಲದೇವತೆಗಳು ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳು ಬಿಲ್ಲವ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಈ ಎರಡು ಶಕ್ತಿಗಳು ಸಮಾಜಕ್ಕೆ ಹೊಸ ಮಾರ್ಗದರ್ಶನ ನೀಡಿದವರು. ಇಂಥಹ ಸಮಾಜದಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕೋಟಿ ಚನ್ನಯ್ಯರ ಜನ್ಮಸ್ಥಳ. ಸ್ಥಳೀಯ ಶಾಸಕಿ ಶಕುಂತಲಾ ಶೆಟ್ಟಿಯವರನ್ನು ಭೇಟಿ ಮಾಡಿ ಜನ್ಮಸ್ಥಳದ ಅಭಿವೃದ್ದಿಗೆ ಸದ್ಯದಲ್ಲೇ ಮುಂದಾಗುತ್ತೇನೆ. ಕೋಟಿ ಚನ್ನಯ್ಯರ ಸಮಾಧಿ ಸ್ಥಳದಲ್ಲಿ ಕೆಲವೊಂದು ಕುರುಹುಗಳು ಲಭ್ಯವಾಗಿವೆ. ಅದನ್ನು ಸಂರಕ್ಷಿಸುವ ಕೆಲಸವನ್ನೂ ಮಾಡುತ್ತೇನೆ ಎಂದು ಸೊರಕೆ ಹೇಳಿದ್ದಾರೆ.
ಕಾರ್ಕಳದಲ್ಲಿ ಈಗಾಗಲೇ ಕೋಟಿ ಚನ್ನಯ್ಯ ಥೀಮ್ ಪಾರ್ಕಿದೆ. ಅಲ್ಲಿ ಆಯುರ್ವೇದ ಸಂಬಂಧಪಟ್ಟ ವನ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ತುಳುನಾಡಿನಲ್ಲಿ ಮಹಾನ್ ದೈವಶಕ್ತಿಯೆಂದೇ ನಂಬಲಾಗುವ ಕೋಟಿ ಚೆನ್ನಯ್ಯರ ಬಗ್ಗೆ ಸ್ಲೈಡಿನಲ್ಲಿ..

ಕೋಟಿ ಚೆನ್ನಯ್ಯ
ಸುಮಾರು 450 ವರ್ಷಗಳ ಹಿಂದೆ ತುಳುನಾಡಿನಲ್ಲಿ ಹುಟ್ಟಿ ಬೆಳೆದ ಅವಳಿ ಸಹೋದರರೇ ಕೋಟಿ ಚೆನ್ನಯ್ಯ. ಆ ಕಾಲದಲ್ಲಿ ಮಹಾನ್ ಪಿಡುಗಾಗಿದ್ದ ವರ್ಣಭೇದ ಮತ್ತು ವರ್ಗಭೇದ ವಿರುದ್ದ ತಿರುಗಿಬಿದ್ದು ಸಮಾಜದಲ್ಲಿ ಅಮಾಯಕ ಬಡ ಜನರ ಪರವಾಗಿ ನಿಂತ ಮಹಾನ್ ಚೇತನ. ತುಳುನಾಡಿನ ಜನಮನದಲ್ಲಿ ಐತಿಹಾಸಿಕ ವೀರ ಅವಳಿ ಸಹೋದರರೆಂದು ನಂಬಿರುವ ದೈವತ್ವ ಶಕ್ತಿಗಳು.

ತುಳುನಾಡಿನ ದೈವಶಕ್ತಿ ಕೋಟಿ ಚೆನ್ನಯ್ಯ
ಕೋಟಿ ಚೆನ್ನಯ್ಯರ ತಾಯಿ ದೇಯಿಬೈದತಿ ದೈವಾಂಶ ಸಂಭೂತೆ ಎನ್ನುವ ಪ್ರತೀತಿಯಿದೆ. ಈಕೆ ಸೂರ್ಯನಾರಾಯಣ ದೇವರ ಪ್ರಸಾದದ ಬಲದಿಂದ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿ ಬೆಳೆದಳು. ಸುವರ್ಣಕೇದಗೆಯೆನ್ನುವ ಹೆಸರಿನಲ್ಲೂ ಕರೆಯಲ್ಪಡುತ್ತಿದ್ದ ಈಕೆ ಮದುವೆಗೆ ಮುನ್ನ ಮೈನರೆದಳು ಎನ್ನುವ ಕಾರಣಕ್ಕಾಗಿ ಆಕೆಯನ್ನು ಸಾಕಿದವರು ಈಕೆಯ ಕಣ್ಣಿಗೆ ವಸ್ತ್ರ ಕಟ್ಟಿ ಕಾಡಿನಲ್ಲಿ ಬಿಡುತ್ತಾರೆ. ಕಾಡಿನಲ್ಲಿ ರೋದಿಸುತ್ತಿದ್ದ ಈಕೆಯನ್ನು ಸಾವನಬೈದ (ಬಿಲ್ಲವ ಸಮುದಾಯದ) ಎನ್ನುವಾತನು ಕರೆತಂದು ಸಾಕುತ್ತಾನೆ.

ಬ್ರಹ್ಮ ಬೈದರ್ಕಳ ಎಂದೂ ಕರೆಯಲ್ಪಡುವ ಕೋಟಿ ಚೆನ್ನಯ್ಯ
ಮುಂದೊಂದು ದಿನ ಕಾಂತ ಎನ್ನುವವನ ಜೊತೆ ಈಕೆಯ ಮದುವೆಯಾಗುತ್ತದೆ. ಪೆರುಮಳ ಬಲ್ಲಾಳ ಎನ್ನುವ ಅರಸ ಕಾಡಿಗೆ ಬೇಟೆಯಾಡಲು ಬಂದಿದ್ದಾಗ ಮುಳ್ಳೊಂದು ತಾಗಿ ಜೀವನ್ಮರಣ ಸ್ಥಿತಿಗೆ ತಲುಪುತ್ತಾನೆ. ಬಸುರಿಯಾಗಿದ್ದ ದೇಯಿಬೈದತಿ ಮದ್ದಿನಿಂದ ಅರಸನ ಪ್ರಾಣ ಉಳಿಸುತ್ತಾಳೆ. ಸಂತೋಷಗೊಂಡ ಅರಸನು ಮುಂದೆ ನಿನ್ನ ಮಕ್ಕಳು ನನ್ನ ಬಳಿಗೆ ಬಂದಾಗ ಕೇಳಿದ್ದನ್ನು ಕೊಡುತ್ತೇನೆ ಎಂದು ವಾಗ್ದಾನ ನೀಡಿ ಹೋಗುತ್ತಾನೆ. ಇತ್ತ ಅವಳಿ ಮಕ್ಕಳಿಗೆ ಜನ್ಮವಿತ್ತು ದೇಯಿಬೈದತಿ ಕೆಲದಿನಗಳ ನಂತರ ಕಾಲವಾಗುತ್ತಾಳೆ. ಈ ಅವಳಿ ಮಕ್ಕಳೇ ಕೋಟಿ ಚೆನ್ನಯ್ಯ.

ಬಿಲ್ಲುವಿದ್ಯೆಯಲ್ಲಿ ಪಾರಂಗತರಾದ ಕೋಟಿ ಚೆನ್ನಯ್ಯ
ತಾಯಿ ಇಲ್ಲದ ಕೋಟಿ ಚೆನ್ನಯ್ಯರನ್ನು ಪೆರುಮಳ ಬಲ್ಲಾಳ ಸಾಕುತ್ತಾನೆ. ವಿದ್ಯೆ, ಬಿಲ್ಲುವಿದ್ಯೆಗಳಲ್ಲಿ ಪಾರಂಗತರಾದ ಈ ಅವಳಿ ಸಹೋದರರು ಜಾತಿಭೇದ ವಿರೋಧಿಸಿಕೊಂಡೇ ಬೆಳೆಯುತ್ತಾರೆ. ದಿನದಿಂದ ದಿನಕ್ಕೆ ಇವರ ಜನಪ್ರಿಯತೆ ಸಹಿಸದ ಅರಸನ ಮಂತ್ರಿ ಈ ಸಹೋದರರಿಗೆ ಕಿರುಕುಳ ಕೊಡಲಾರಂಭಿಸುತ್ತಾನೆ. ಮಂತ್ರಿಯ ಕಿರುಕುಳ ಸಹಿಸಲಾರದೇ ಕೋಟಿ ಚೆನ್ನಯ್ಯರು ಮಂತ್ರಿಯನ್ನು ಕೊಂದು ಅರಸನ ಕೋಪಕ್ಕೆ ತುತ್ತಾಗುತ್ತಾರೆ.

ಕೋಟಿ ಚೆನ್ನಯ್ಯರ ವೀರ ಮರಣ
ಅಲ್ಲಿಂದ ತೊರೆದು ಕೋಟಿ ಚೆನ್ನಯ್ಯರು ಪಡುಮಲೆ, ಎಣ್ಮೂರಿನ ದೇವ ಬಲ್ಲಾಳರಲ್ಲಿ ಆಶ್ರಯ ಪಡೆಯುತ್ತಾರೆ. ಗಡಿವಿಚಾರಕ್ಕೆ ಸಂಬಂಧಿಸಿದಂತೆ ಎಣ್ಮೂರು ಮತ್ತು ಕೇಮರ ಬಲ್ಲಾಳರ ನಡುವೆ ಯುದ್ದ ನಡೆಯುತ್ತದೆ. ಯುದ್ದದಲ್ಲಿ ಹಿಂದಿನಿಂದ ಬಂದ ಬಲ್ಲಾಳರು ಕೋಟಿಯನ್ನು ಘಾಸಿಗೊಳಿಸುತ್ತಾರೆ. ಕೋಟಿ ಮರಣಹೊಂದುತ್ತಾನೆ, ಸಹೋದರರನ ಸಾವಿಗೆ ತತ್ತರಿಸಿದ ಚೆನ್ನಯ್ಯ ಬಂಡೆಗೆ ತಲೆಬಡಿದುಕೊಂಡು ತಾನೂ ಸಾವನ್ನಪ್ಪುತ್ತಾನೆ.
ಹೆಚ್ಚಿನ ಮಾಹಿತಿಗಾಗಿ : http://www.kotichennaya.in/












Click it and Unblock the Notifications