ಖಾಸಗಿ ಬಸ್ ಗಳಿಂದ ನಷ್ಟವಾಗುತ್ತಿದೆ : ರೆಡ್ಡಿ
ಬೆಂಗಳೂರು, ಜೂ. 2: ಖಾಸಗಿ ಬಸ್ಸುಗಳಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕೆಎಸ್ಆರ್ ಟಿಸಿ ಬಸ್ಸುಗಳು ಸಂಚರಿಸುವ ಮಾರ್ಗದಲ್ಲಿ, ಖಾಸಗಿ ಬಸ್ಸುಗಳು ಸಂಚರಿಸದಂತೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಭಾನುವಾರ ನಗರದ ಆಸ್ಟೀನ್ ಟೌನ್‌ನಲ್ಲಿ ಕೆಎಸ್‌ಆರ್ ಟಿಸಿಯ ಐವತ್ತು ಹೊಸ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಖಾಸಗಿ ಬಸ್ಸುಗಳು ಬೇರೆ ಮಾರ್ಗದಲ್ಲಿ ಪರವಾನಗಿ ಪಡೆದು, ಕೆಎಸ್‌ಆರ್ ಟಿಸಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲೇ ಸಂಚರಿಸುತ್ತವೆ.
ಇದರಿಂದ ಸಾರಿಗೆ ಸಂಸ್ಥೆಗೆ ಹೆಚ್ಚು ನಷ್ಟ ಉಂಟಾಗುತ್ತಿದೆ. ಆದ್ದರಿಂದ ಯಾವ ಮಾರ್ಗದಲ್ಲಿ ಖಾಸಗಿ ಬಸ್ಸುಗಳು ಪರವಾನಗಿ ಪಡೆದಿರುತ್ತವೆಯೋ ಅದೇ ಮಾರ್ಗದಲ್ಲಿ ಮಾತ್ರ ಅವು ಸಂಚರಿಸುವಂತೆ ಕಟ್ಟು ನಿಟ್ಟಿನ ನಿಯಮ ರೂಪಿಸಲಾಗುವುದು ಎಂದರು.
ಹೊಸ ಬಸ್ ಅಳವಡಿಕೆ, ನಗರ ಸಾರಿಗೆಗಳಿಗೆ ಉಂಟಾಗುತ್ತಿರುವ ನಷ್ಟ ಮುಂತಾದ ವಿಚಾರಗಗಳ ಕುರಿತಂತೆ ಸಚಿವರು ಹಲವಾರು ವಿಷಯಗಳನ್ನು ಹಂಚಿಕೊಂಡರು. ರಾಮಲಿಂಗಾ ರೆಡ್ಡಿ ಅವರ ಒಟ್ಟಾರೆ ಹೇಳಿಕೆಗಳು ಹೀಗಿವೆ.

1,500 ಹೊಸ ಬಸ್ ಸೇರ್ಪಡೆ
ಪ್ರಸಕ್ತ ಸಾಲಿನಲ್ಲಿ ಒಟ್ಟು 1,528 ಬಸ್‌ಗಳನ್ನು ಇಲಾಖೆಗೆ ಸೇರ್ಪಡೆ ಮಾಡಲಾಗುವುದು. ಇವುಗಳಲ್ಲಿ 236 ಗ್ರಾಮಾಂತರ ಸಾರಿಗೆ, 1097 ಕರ್ನಾಟಕ ಸಾರಿಗೆ ಬಸ್, 87 ನಗರ ಸಾರಿಗೆ, 6 ಕರ್ನಾಟಕ ವೈಭವ, 58 ರಾಜಹಂಸ, 62 ವೋಲ್ವೋ ಮಲ್ಟಿ ಆಕ್ಷನ್ ಬಸ್‌ಗಳು ಸೇರಿವೆ.

ಮೈಸೂರಿಗೆ ಫ್ಲೈ ಬಸ್ ಸೇವೆ
ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆಯನ್ನು 2 ತಿಂಗಳಿನಲ್ಲಿ ಆರಂಭಿಸಲಾಗುವುದು. ಇದಕ್ಕಾಗಿ ಐರಾವತ ಕ್ಲಬ್ ಕ್ಲಾಸ್ ಬಸ್ಸನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಬಸ್ ಗಳಲ್ಲಿ ಸಿಸಿಟಿವಿ ಅಳವಡಿಕೆ
ಪ್ರಯಾಣಿಕರ ಸುರಕ್ಷತೆಗಾಗಿ 500 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಸಿಸಿ ಕ್ಯಾಮೆರಾ ಅಳವಡಿಕೆ. ದೂರ ಸಂಚಾರ ಮಾಡುವ, ರಾತ್ರಿ ವೇಳೆ ಸಂಚಾರ ಹಾಗೂ ತಂಗುವ ಬಸ್‌ಗಳಿಗೆ ಈ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆ.

ನಗರ ಸಾರಿಗೆಗಳು ನಷ್ಟದಲ್ಲಿವೆ
ಬಿಎಂಟಿಸಿ ಹೊರತು ಪಡಿಸಿ ಉಳಿದ ನಗರ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಅವುಗಳು ನಷ್ಟದಿಂದ ಹೊರಬರುವಂತೆ ಮಾಡಲು ಪ್ರಯತ್ನ. ಕೆಲವು ನಗರಗಳಿಗೆ ನಗರ ಸಾರಿಗೆ ವಿಸ್ತರಣೆ ಮಾಡಲು ಚಿಂತನೆ.

ಶೀಘ್ರ ಲೋಕಾರ್ಪಣೆ
ಬೆಂಗಳೂರಿನ ಪೀಣ್ಯದಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಯಾಟ್ ಲೈಟ್ ಬಸ್ ನಿಲ್ದಾಣವನ್ನು ಎರಡು ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು. 50 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ವಿಭಾಗೀಯ ಕಚೇರಿಗಳನ್ನು ಅಭಿವೃದ್ಧಿ ಪಡಿಸಲಾಗುವುದು.











Click it and Unblock the Notifications