ಮರಾಠಿಗರ ಉದ್ಧಟತನ, ಕನ್ನಡಿಗರ ದಿವ್ಯ ಮೌನ!

Why Kannadigas are mum on Maratha rudeness
ಬೆಂಗಳೂರು, ಮೇ. 30 : ಗತ್ತಿನಿಂದ ಮರಾಠಿಗರ ಸ್ಟೈಲಿನಲ್ಲಿ ಪೇಟ ಧರಿಸಿಬಂದು ಕರ್ನಾಟಕದ ಆಡಳಿತದ ಮೊಗಸಾಲೆ ವಿಧಾನಸೌಧದಲ್ಲಿ ಹಠಕ್ಕೆ ಬಿದ್ದು ಮರಾಠಿಯಲ್ಲೇ ಪ್ರಮಾಣ ಸ್ವೀಕರಿಸಿದ ಇಬ್ಬರು ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಶಾಸಕರ ಕನ್ನಡ ವಿರೋಧಿ ನೀತಿಗೆ ಅಂತಹ ಪ್ರತಿಭಟನೆ ವ್ಯಕ್ತವಾಗಿಲ್ಲ.

ಬೆಳಗಾವಿ ಜಿಲ್ಲೆಯ ಖಾನಾಪುರದ ಶಾಸಕ ಅರವಿಂದ್ ಚಂದ್ರಕಾಂತ್ ಪಾಟೀಲ್ (ಪಕ್ಷೇತರ) ಮತ್ತು ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಲಕ್ಷ್ಮಣ ಪಾಟೀಲ (ಪಕ್ಷೇತರ) ಅವರು ಕೇಸರಿ ಬಣ್ಣದ ಪಗಡಿ ಧರಿಸಿ ಬಂದು ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಇಡೀ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಸೆಡ್ಡು ಹೊಡೆದಿದ್ದಾರೆ.

ಸದನದಲ್ಲಿ ಕೆಲವರಿಂದ ಮಾತ್ರ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಪ್ರಮಾಣವಚನ ಸ್ವೀಕರಿಸಿದ ನಂತರ ಪತ್ರಕರ್ತರು, ಕನ್ನಡದಲ್ಲೇಕೆ ಪ್ರಮಾಣ ಸ್ವೀಕರಿಸಲಿಲ್ಲ ಎಂದು ಕೇಳಿದ್ದಕ್ಕೆ, ನಮಗೆ ಕನ್ನಡ ಬರುವುದಿಲ್ಲ ಎಂದು ಉದ್ಧಟತನದಿಂದ ಉತ್ತರಿಸಿದ್ದರು. ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ಅವರ ಆತ್ಮಸಾಕ್ಷಿಗೂ ಗೊತ್ತಿರುವ ಸಂಗತಿ.

ಅವರಿಬ್ಬರು ಮರಾಠಿಯಲ್ಲಿ ಪ್ರಮಾಣ ಸ್ವೀಕರಿಸಿದ್ದು, ಸದನದಲ್ಲಿಯೇ ಪ್ರತಿಭಟನೆಗೆ ಒಳಗಾಗಿಲ್ಲ. ಕೆಲವರು ಆಕ್ಷೇಪಿಸಿದ್ದು ಹೊರತುಪಡಿಸಿದರೆ, ಉಳಿದವರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಕನ್ನಡದ ಬಗ್ಗೆ ಅಧಿಕಾರಿಗಳಿಗೆ ಪಾಠ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠಪಕ್ಷ ಇದನ್ನು ವಿರೋಧಿಸಬೇಕಾಗಿತ್ತು ಅಥವಾ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಲು ಹೇಳಬೇಕಾಗಿತ್ತು ಎಂಬ ಮಾತುಗಳು ಕನ್ನಡಿಗರಿಂದ ವ್ಯಕ್ತವಾಗಿವೆ.

ಮರಾಠಿಗರ ಉದ್ಧಟತನ ಇದು ಮೊದಲೇನಲ್ಲ. ಕಳೆದ ವರ್ಷ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆಯಾಗಿ ಅಧಿವೇಶನ ನಡೆದ ಸಂದರ್ಭದಲ್ಲಿ ಮರಾಠಿಗರು ಪ್ರತಿಭಟನೆ ನಡೆಸಿದ್ದರು ಮತ್ತು ಕೆಲ ಮರಾಠಿ ಪತ್ರಿಕೆಗಳ ಪತ್ರಕರ್ತರು ಬೆಳಗಾವಿಯ ಮರಾಠಿಗರನ್ನು ಪ್ರಚೋದಿಸಲು ಯತ್ನಿಸಿದ್ದರು. ಇದನ್ನು ಹಿರಿಯ ಪತ್ರಕರ್ತ ರಾಜದೀಪ್ ಸಮರ್ಥಿಸಿಕೊಂಡಿದ್ದರು.

ದೊಡ್ಡಬಳ್ಳಾಪುರದ ರೆಸಾರ್ಟಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ದಾಳಿ ನಡೆಸಿ, ಒಂದು ವಾರದ ನಂತರ ವಿಡಿಯೋ ಬಿಡುಗಡೆ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಯಾಕೋ ಮರಾಠಿಗರ ಈ ದುರ್ವರ್ತನೆ ಬಗ್ಗೆ ಚಕಾರವೆತ್ತಿಲ್ಲ. ಕಸ್ತೂರಿ ಕನ್ನಡ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದೆಯಷ್ಟೆ. ಉಳಿದ ಕನ್ನಡಪರ ಸಂಘಟನೆಗಳು ಬಾಯಿಮುಚ್ಚಿ ಕುಳಿತಿವೆ. ಇದನ್ನು ಪ್ರತಿಭಟಿಸಿದ್ದು ಪತ್ರಕರ್ತರು ಮಾತ್ರ.

ಇಷ್ಟು ದಿನ ವಿಧಾನಸೌಧದ ಹೊರಗಡೆಯಿಂದ ಬೆಳಗಾವಿ ಮರಾಠಿಗರದು ಎಂದು ಘಂಟಾಘೋಷವಾಗಿ ಸಾರುತ್ತಿದ್ದ ಮರಾಠಿಗರು ಇನ್ನು ವಿಧಾನಸೌಧದ ಗೋಡೆಗೋಡೆಗಳು ಪ್ರತಿಧ್ವನಿಸುವಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ನೀಡಬೇಕು ಎಂದು ಗರ್ಜಿಸಿದರೂ ಅಚ್ಚರಿಯಿಲ್ಲ.

ಹಾಗೆ ನೋಡಿದರೆ, ಗುಲಬರ್ಗ ಉತ್ತರ ಕ್ಷೇತ್ರದ ಶಾಸಕರಾಗಿರುವ ಖಮರುಲ್ ಇಸ್ಲಾಂ ಅವರು ಅಲ್ಲಾಹುವಿನ ಹೆಸರಲ್ಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು. ಇದಕ್ಕೆ ಯಾವುದೇ ಪ್ರತಿಭಟನೆ ವ್ಯಕ್ತವಾಗಿಲ್ಲ. ಬೀದರ ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ದೇವನಾಗರಿ ಲಿಪಿಯಲ್ಲಿ ಬರೆದುಕೊಂಡು ಬಂದು ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿದರು. ಸಂಭಾಜಿ, ಅರವಿಂದ್, ಖಮರುಲ್ ಕೂಡ ಹೀಗೇ ಮಾಡಬಹುದಿತ್ತಲ್ಲ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+