ಪ್ರಮಾಣ ವಚನದಲ್ಲೂ ಗಮನ ಸೆಳೆದ ಶಾಸಕರು

ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಪ್ರತಿಯೊಬ್ಬ ಶಾಸಕರು ಸ್ಪೀಕರ್ ಅವರ ಮುಂದೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರು ಮರಾಠಿಯಲ್ಲಿ, ಒಬ್ಬ ಸಚಿವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ಪೀಕರಿಸಿದರೂ ಸದನದಲ್ಲಿ ವಿರೋಧದ ಸದ್ದು ಮಾತ್ರ ಹೊರಡಲಿಲ್ಲ. (ಮರಾಠಿಗರ ಉದ್ಧಟತನ, ಕನ್ನಡಿಗರ ದಿವ್ಯ ಮೌನ!)
ರೈತ, ಭಗವಂತ, ತಂದೆ ತಾಯಿ ಹೀಗೆ ಶಾಸಕರು ತಮಗಿಷ್ಟವಾದವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಿದ ಮನವಿಗೆ ಯಾರು ಸರಿಯಾರಿ ಸ್ಪಂದಿಸಲಿಲ್ಲ.
ರೇವಣ್ಣನ ರಾಹುಕಾಲ : ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಜ್ಯೋತಿಷ್ಯದ ಲೆಕ್ಕಾಚಾರವಿಲ್ಲದೆ ಏನು ಮಾಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಬುಧವಾರ 1.30ರ ವರೆಗೆ ರಾಹುಕಾಲವಿತ್ತು. ಅದು ಮುಗಿದ ತಕ್ಷಣ 1.35ಕ್ಕೆ ಸದನಕ್ಕೆ ಬಂದ ರೇವಣ್ಣ ನೇರವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ ಪಕ್ಷದ ಶಾಸಕರು ಮತ್ತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ರೇವಣ್ಣಾ? ಒಳ್ಳೆ ಸಮಯವೇ ಎಂದು ರೇವಣ್ಣ ಅವರನ್ನು ಪ್ರಶ್ನಿಸಿದರು. ನಗುವಿನ ಮೂಲಕವೇ ಶಾಸಕರಿಗೆ ರೇವಣ್ಣ ಉತ್ತರಿಸಿದರು.
ವಿಶೇಷವಾಗಿ ಪ್ರಮಾಣ ಮಾಡಿವರು : ಮಾಜಿ ಸಚಿವ ಅಪ್ಪಚ್ಚು ರಂಜನ್ ಕಾವೇರಿ ಮಾತೆ, ಜೀವರಾಜ್ ಶೃಂಗೇರಿಯ ಶಾರದಾಂಬೆ, ರಾಮಕೃಷ್ಣ ಸಿದ್ದಲಿಂಗಪ್ಪ ದೊಡ್ಡಮನಿ ಪ್ರಪಂಚದ ಎಲ್ಲಾ ದಾರ್ಶನಿಕ, ವಿಜಯ್ ಕಾಶಪ್ಪನವರ್ ಕೂಡಲಸಂಗಮನಾಥನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪಿ. ಎಂ. ನರೇಂದ್ರಸ್ವಾಮಿ ಹಾಗೂ ವೈ.ರಾಮಕ್ಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮೋದ್ ಮಧ್ವರಾಜ್ ಉಡುಪಿ ಶ್ರೀ ಕೃಷ್ಣ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಶಿವಮೊಗ್ಗ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಮ್ಮ ಮತ್ತು ದೊಡ್ಡಮ್ಮನ ಪ್ರಮಾಣ ಮಾಡಿದರು.
ಅರವಿಂದ ಚಂದ್ರಕಾಂತ್ ಬೆಲ್ಲದ್ ಪರಮಹಂಸ ಯೋಗಾನಂದ, ತಂದೆ-ತಾಯಿ ಹಾಗೂ ಸತ್ಯ ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭಗವಂತನ ಹೆಸರಿನಲ್ಲಿ ಹಾಗೂ ಜಗದೀಶ್ ಶೆಟ್ಟರ್ ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಶಾಸಕರು ಅಸಂವಿಧಾನಿಕವಾಗಿ ಪ್ರಮಾಣ ವಚನ ಸ್ವೀಕರಿದ ಬಗ್ಗೆ ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೆದಾರ್ ಕಾನೂನು ತಜ್ಞರೊಂದಿಗೆ ಚರ್ಚಿಸಿದರು. ಅಸಂವಿಧಾನಿಕವಾಗಿ ಪ್ರಮಾಣ ಮಾಡಿದವರು ಗುರುವಾರ ಪುನಃ ಪ್ರಮಾಣ ವಚನ ಸ್ವೀಕರಿಸಲು ಸ್ಪೀಕರ್ ಆದೇಶ ನೀಡಿದ್ದಾರೆ.(ಮೊದಲ ದಿನದ ಸದನ ಸ್ವಾರಸ್ಯಗಳು)












Click it and Unblock the Notifications