ಸದನದ ಸ್ವಾರಸ್ಯಗಳು : ಎಚ್ಡಿಕೆ ಬಂದ್ರು, ಡಿಕೆಶಿ ಬರಲಿಲ್ಲ

ಬುಧವಾರ ಸದನಕ್ಕೆ ಗೈರು ಹಾಜರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗುರುವಾರ ಸದನಕ್ಕೆ ಆಗಮಿಸಿದ್ದರು. ಭಗವಂತನ ಹೆಸರಿನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸಿಎಂ ಸಿದ್ದರಾಮಯ್ಯ ಅವರ ಕೈ ಕುಲುಕಿ ಅಭಿನಂದನೆ ಸಲ್ಲಿಸಿದರು.
ಶುಕ್ರವಾರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಹಿರಿಯ ಶಾಸಕ ಕಾಗೋಡು ತಿಮ್ಮಪ್ಪ ಇಂದು ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೇರೆ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಆದ್ದರಿಂದ ಕಾಗೋಡು ತಿಮ್ಮಪ್ಪ ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಏಳು ಮಂದಿ ಗೈರು : ಸಚಿವ ಸ್ಥಾನ ವಂಚಿತ ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಸದನಕ್ಕೆ ಗುರುವಾರವೂ ಆಗಮಿಸಲಿಲ್ಲ. ಆದ್ದರಿಂದ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಶಾಸಕ ಬಿ.ಶ್ರೀರಾಮುಲು, ಕಂಪ್ಲಿ ಶಾಸಕ ಸುರೇಶ್ ಬಾಬು ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು ಎರಡನೇ ದಿನದ ಕಲಾಪಕ್ಕೂ ಗೈರು ಹಾಜರಾಗಿದ್ದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಟ್, ಹಾಸನ ಕ್ಷೇತ್ರದ ಎಚ್.ಎಸ್.ಪಕಾಶ್, ಬಿಜೆಪಿಯ ಜಗದೀಶ್ ಕುಮಾರ್ ಗೈರು ಹಾಜರಾಗಿದ್ದು, ಪ್ರಮಾಣ ವಚನ ಸ್ವೀಕರಿಲ್ಲ. ಗೈರು ಹಾಜರಾಗಿರುವ ಶಾಸಕರು ಪ್ರಮಾಣ ವಚನ ಸ್ವೀಕರಿಸುವವರೆಗೆ ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲ ಮತ್ತು ಮತದಾನ ಮಾಡುವಂತಿಲ್ಲ.
ಕಂಡಿತು ಹಸಿರು ಶಾಲು : ಸರ್ವೋದಯ ಪಕ್ಷದ ಶಾಸಕ ಮತ್ತು ರೈತ ಹೋರಾಟಗಾರ ಪುಟ್ಟಣ್ಣಯ್ಯ ಇಂದು ಅಧಿವೇಶನಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದರು. ಬುಧವಾರ ಅವರು ಆಗಮಿಸುವ ವೇಳೆಗಾಗಲೇ ಸದನ ಮುಕ್ತಾಯವಾಗಿತ್ತು.
ಸದನ ಕೇಳಿಸಿತು ತುಳು : ಬೆಳ್ತಗಂಡಿ ಶಾಸಕ ವಸಂತ ಬಂಗೇರ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್, ಕನ್ನಡದಲ್ಲಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು. ಕೊನೆಗೆ ಎರಡನೇ ಬಾರಿ ಕನ್ನಡದಲ್ಲಿ ಪ್ರಮಾಣ ಮಾಡಿದರು.
ಕಾವೇರಿಗೆ ಬೆಲೆ ಇಲ್ಲ : ಮಾಜಿ ಸಚಿವ ಅಪ್ಪಚ್ಚು ರಂಜನ್ ಬುಧವಾರ ಕಾವೇರಿ ತಾಯಿಯ ಮೇಲೆ ಆಣೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು ಅವರಿಗೆ ಪುನಃ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿ, ಮತ್ತೊಮ್ಮೆ ಪ್ರಮಾಣ ಮಾಡಿಸಲಾಯಿತು.
ಮರು ಪ್ರಮಾಣ : ತಂದೆ-ತಾಯಿ, ರೈತ, ದಾರ್ಶನಿಕರ ಹೆಸರಿನಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಸದಸ್ಯರು ಇಂದು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದರು. (ಪ್ರಮಾಣ ವಚನದಲ್ಲೂ ಗಮನ ಸೆಳೆದವರು)
ಎರಡನೇ ದಿನ ಕಲಾಪ ಮುಕ್ತಾಯಗೊಂಡಿದ್ದು, ಶುಕ್ರವಾರ ಸ್ಪೀಕರ್ ಸ್ಥಾನದ ಚುನಾವಣೆ ನಡೆಯಲಿದೆ. ಸೋಮವಾರ ಜೂನ್ 3ರಂದು ರಾಜ್ಯಪಾಲರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜೂನ್ 6ರ ವರೆಗೆ ಕಲಾಪಗಳು ನಡೆಯಲಿವೆ.












Click it and Unblock the Notifications