ಅಂಕಿತ್ ಗೆ ಜಾಮೀನು, ಫಿಕ್ಸಿಂಗ್ ತನಿಖೆ ಸಿಬಿಐ ಕೈಗೆ?
ನವದೆಹಲಿ, ಮೇ.30: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ರಾಜಸ್ಥಾನ ರಾಯಲ್ಸ್ ಆಟಗಾರ ಅಂಕಿತ್ ಚಾವ್ಹಾಣ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅಂಕಿತ್ ಅವರಿಗೆ ದೆಹಲಿಯ ಸಾಕೇತ್ ಕೋರ್ಟ್ ಗುರುವಾರ(ಮೇ.30) ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ನಡುವೆ ಇಡೀ ಪ್ರಕರಣವನ್ನು ಸಿಬಿಐ ಕೈಗೆ ಒಪ್ಪಿಸುವ ಬಗ್ಗೆ ಕೂಡಾ ಭಾರಿ ಚರ್ಚೆ ನಡೆದಿದೆ.
ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಐಪಿಎಲ್ ಫಿಕ್ಸಿಂಗ್ ಬರೀ ಬೆಟ್ಟಿಂಗ್ ದಂಧೆಗೆ ಸೀಮಿತವಾಗಿಲ್ಲ. ಹವಾಲ, ಮನಿ ಲಾಂಡ್ರಿಂಗ್, ಕಾಲ್ ಗರ್ಲ್ಸ್ ದುರ್ಬಳಕೆ ಮುಂತಾದ ಕ್ರೈಂಗಳನ್ನು ಜೊತೆಯಲ್ಲಿ ಹೊಂದಿದೆ. ಹೀಗಾಗಿ ಸಿಬಿಐ ತನಿಖೆ ನಡೆಸುವ ಸಾಧ್ಯತೆಯಿದೆಯಂತೆ.
ಆದರೆ, ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಮನವಿ ಸಲ್ಲಿಸಬೇಕಾಗುತ್ತದೆ ಎಂದು ಗೃಹ ಕಾರ್ಯದರ್ಶಿ ಆರ್ ಕೆ ಸಿಂಗ್ ಹೇಳಿದ್ದಾರೆ. ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಹುದ್ದೆಯಿಂದ ಕೆಳಗಿಳಿಯಲಿ ಎಂದು ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದು ಬಿಟ್ಟರೆ ಯುಪಿಎ ಸರ್ಕಾರ ಅಷ್ಟಾಗಿ ಐಪಿಎಲ್ ಫಿಕ್ಸಿಂಗ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರದಿಂದ ಆದೇಶ ಬಂದರೆ ಸಿಬಿಐ ತಂಡ ತನಿಖೆಗೆ ಸಿದ್ಧವಿದೆ ಎಂಬ ಸೂಚನೆ ಸಿಕ್ಕಿದೆ.

ಅಂಕಿತ್ ಜಾಮೀನು: ಸಹ ಆರೋಪಿಗಳಾದ ಶ್ರೀಶಾಂತ್, ಅಜಿತ್ ಜೊತೆ ತಿಹಾರ್ ಜೈಲು ಸೇರಿದ್ದ ಅಂಕಿತ್ ಅವರು ಗುರುವಾರ ಸಂಜೆ ವೇಳೆಗೆ ಜೈಲಿನಿಂದ ಹೊರ ಬೀಳುವ ಸಾಧ್ಯತೆಯಿದೆ. ಅಂಕಿತ್ ಅವರ ಮದುವೆ ಮುಹೂರ್ತ ಫಿಕ್ಸ್ ಆಗಿರುವ ಹಿನ್ನೆಲೆಯಲ್ಲಿ ಕೋರ್ಟ್ ಅಂಕಿತ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಜೂ.6 ರ ತನಕ ಮಧ್ಯಂತರ ಜಾಮೀನು ಸಿಕ್ಕಿದ್ದು ನಂತರ ಕೋರ್ಟಿಗೆ ಶರಣಾಗಬೇಕಿದೆ.
ಜೂ.2 ರಂದು ಅಂಕಿತ್ ಅವರ ಮದುವೆ ಫಿಕ್ಸ್ ಆಗಿದ್ದು, ಆಹ್ವಾನ ಪತ್ರಿಕೆ ಹಂಚಿಯಾಗಿದೆ. ಈ ಸಮಯದಲ್ಲಿ ಅಂಕಿತ್ ಗೆ ಜಾಮೀನು ನೀಡದೆ ಜೈಲಿನಲ್ಲಿ ಕೂರಿಸಿದರೆ ವಧುವಿನ ಮನೆಯವರ ಗತಿ ಏನು? ಎಂದು ಅಂಕಿತ್ ಪರ ವಕೀಲರು ಮಂಡಿಸಿದ ವಾದಕ್ಕೆ ನ್ಯಾಯಮೂರ್ತಿ ತಲೆದೂಗಿ ಜಾಮೀನು ಮಂಜೂರು ಮಾಡಿದ್ದಾರೆ.
ಜಾಮೀನು ಪಡೆಯಲು ಅಂಕಿತ್ 1 ಲಕ್ಷ ರು ಪಾವತಿಸಬೇಕು ಹಾಗೂ ಜೂನ್ 6 ರೊಳಗೆ ದೆಹಲಿ ಪೊಲೀಸರಿಗೆ ಶರಣಾಗಬೇಕು ಎಂದು ಷರತ್ತುಗಳನ್ನು ಕೋರ್ಟ್ ವಿಧಿಸಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಶ್ರೀಶಾಂತ್, ಅಂಕಿತ್ ಹಾಗೂ ಅಜಿತ್ ಅವರನ್ನು ದೆಹಲಿ ಪೊಲೀಸರು ಮೇ.16ರನ್ನು ಬಂಧಿಸಿದ್ದರು.












Click it and Unblock the Notifications