ಶುಕ್ರವಾರ ಮತ ಎಣಿಕೆ, ಪಿರಿಯಾಪಟ್ಟಣದ ದೊರೆ ಯಾರು?
ಮೈಸೂರು, ಮೇ 30 : ತೀವ್ರ ಕುತೂಹಲ ಕೆರಳಿಸಿರುವ ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯಲಿದೆ. ಮತ ಎಣಿಕೆಗಾಗಿ ರಾಜ್ಯ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಬೆಳಗ್ಗೆ ಏಳು ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.
ಒಟ್ಟು 205 ಮತಗಟ್ಟೆಗಳ ಮತ ಎಣಿಕೆ ಕಾರ್ಯ 17 ಸುತ್ತುಗಳಲ್ಲಿ ನಡೆಯಲಿದೆ. ನಗರದ ಪುಷ್ಪಾ ಕಾನ್ವೆಂಟ್ ಕಟ್ಟಡದಲ್ಲಿ ಮತ ಪೆಟ್ಟಿಗೆಗಳನ್ನು ಇಡಲಾಗಿದ್ದು, ಅಲ್ಲೇ ಮತ ಎಣಿಕೆ ನಡೆಯಲಿದೆ. ಜನರು ಉತ್ಸಾಹದಿಂದ ಮತದಾನ ಮಾಡಿದ್ದು, ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಶೇ 83.84 ರಷ್ಟು ಮತದಾನವಾಗಿದೆ.
ಮತ ಎಣಿಕೆಗೆ ತೊಂದರೆ ಆಗಬಾರದು ಎಂಬ ಕಾರಣದಿಂದಾಗಿ ಮತಪೆಟ್ಟಿಗೆ ಇರುವ ಪುಷ್ಪಾ ಕಾನ್ವೆಂಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪಿರಿಯಾಪಟ್ಟಣ ಯಾರ ವಶವಾಗುತ್ತದೆ ಎಂದು ಸ್ಥಳೀಯರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ವಿಜೇತ ಅಭ್ಯರ್ಥಿಯ ಮೆರವಣಿಗೆ, ಸಭೆ, ಸಮಾರಂಭ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು ಮುಂತಾದ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ಮಧ್ಯಾಹ್ನದ ವೇಳೆಗೆ ಕ್ಷೇತ್ರದ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ. ಕ್ಷೇತ್ರದ ಚುನಾವಣೆ ಗೆಲುವಿನ ಲೆಕ್ಕಾಚಾರಗಳೇನು ನೋಡೋಣ.

ಸಿದ್ದರಾಮಯ್ಯ ಪ್ರಭಾವ
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಮಾಡಿದ ಘೋಷಣೆಗಳು ಮತ್ತು ಅವರ ತವರು ಜಿಲ್ಲೆ ಎಂಬ ಅಂಶಗಳು ಮತದಾರ ಗಮನಿಸಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಖಂಡಿತ. ಪಿರಿಯಾಪಟ್ಟಣ ಕಳೆದುಕೊಂಡರು ಕಾಂಗ್ರೆಸ್ ಗೆ ನಷ್ಟವಿಲ್ಲ. ಗೆದ್ದರೆ ಶಾಸಕರ ಸಂಖ್ಯೆ ಹೆಚ್ಚಾಗಲಿದೆ.

ಬಿಜೆಪಿಗೆ ಅನುಕಂಪವೇ ಆಧಾರ
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಮತಗಳು ಹರಿದು ಬಂದಿದ್ದರೆ ಕ್ಷೇತ್ರದಲ್ಲಿ ಕಮಲದ ಹೂ ಅರಳುವುದು ಖಚಿತ. ಬಿಜೆಪಿ ಅಭ್ಯರ್ಥಿ ಸಾವಿನಿಂದಾಗಿಯೇ ಚುನಾವಣೆ ತಡವಾಗಿ ನಡೆದಿದೆ. ಕ್ಷೇತ್ರದಲ್ಲಿ ಗೆದ್ದರೆ ವಿರೋಧ ಪಕ್ಷದ ಸ್ಥಾನ ದೊರೆಯಲಿದೆ.

ಜೆಡಿಎಸ್ ಪ್ರಬಲ ಪೈಪೋಟಿ
ಕ್ಷೇತ್ರದ ತುಂಬಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ಮಾಡಿದ್ದಾರೆ. ತಮ್ಮ ಕುಟುಂಬದ ಎದುರಾಳಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಬಾರದು ಎಂದು ಶತ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರದಲ್ಲಿ ಗೆದ್ದರೆ, ವಿರೋಧ ಪಕ್ಷದ ಸ್ಥಾನ ದೊರೆಕಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಪ್ರಬಲ ಪೈಟೋಟಿಯನ್ನು ಪಕ್ಷ ನೀಡಿದೆ.

ಕೆಜೆಪಿ, ಬಿಎಸ್ಆರ್ ಹಿಂದೆ
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರಿದ್ದು, ಕೆಜೆಪಿ ಕ್ಷೇತ್ರದಲ್ಲಿ ತಟಸ್ಥವಾಗಿದೆ. ಆದರೆ, ಬಿಎಸ್ಆರ್ ಅಧ್ಯಕ್ಷ ಬಿ.ಶ್ರೀರಾಮುಲು ಕೊನೆ ಕ್ಷಣದವರೆಗೂ ಪ್ರಚಾರ ಮಾಡಿದ್ದಾರೆ. ಇದರಿಂದ ಲಾಭವಾಗುವ ಬಗ್ಗೆ ಅವರಿಗೆ ಅನುಮಾನವಿದೆ. ಆದ್ದರಿಂದ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಕಡಿಮೆ.

ಕ್ಷೇತ್ರ ಕೈತಪ್ಪಿದರೆ ಮುಖಭಂಗ
ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಹೊರತು ಪಡಿಸಿ ಬೇರೆ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರೆ, ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ ಉಂಟಾಗಲಿದೆ. ಮುಖ್ಯಮಂತ್ರಿ ಆದ ನಂತರ ನಡೆದ ಚುನಾವಣೆಯಲ್ಲಿ ಪಕ್ಷ ಸೋತಿತು ಎಂಬ ಹೆಸರು ಸಿದ್ದರಾಮಯ್ಯ ಅವರ ಹೆಗಲೇರಲಿದೆ.












Click it and Unblock the Notifications