ಮಕ್ಕಳ ಕೊರತೆ ಇರುವಲ್ಲಿ ಸೌಕರ್ಯ ಶಾಲೆ : ಕಿಮ್ಮನೆ

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಮಲೆನಾಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನಸಂಖ್ಯೆ ಬಹಳ ಕಡಿಮೆ. ಹಲವಾರು ಕುಟುಂಬಗಳು ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗಿವೆ. ಆದ್ದರಿಂದ ಶಾಲೆಗಳಲ್ಲಿ ಮಕ್ಕಳ ಕೊರತೆ ಉಂಟಾಗಿದೆ.
ಮಕ್ಕಳು ಇಂಗ್ಲಿಷ್ ಮಾಧ್ಯಮ ದಲ್ಲಿ ಓದಬೇಕೆಂದು, ಪಟ್ಟಣಕ್ಕೆ ವಾಹನದಲ್ಲಿ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆದ್ದರಿಂದ ಬಹಳಷ್ಟು ಶಾಲೆಗಳು ಮುಚ್ಚಿ ಹೋಗಿವೆ. 5-6 ಮಕ್ಕಳಿಗಾಗಿ ಇಬ್ಬರು ಶಿಕ್ಷಕರು, ಇಬ್ಬರು ಅಡುಗೆಯವರು ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದೆ ಎಂದು ಸಚಿವರು ವಿಶ್ಲೇಷಿಸಿದರು.
ಈ ಕೊರತೆ ನಿವಾರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಮಕ್ಕಳ ಕೊರತೆ ಇರುವ ಶಾಲೆಗಳನ್ನು ವಿಲೀನಗೊಳಿಸಿ ಗ್ರಾಮ ಪಂಚಾಯಿತಿ ಹಂತದಲ್ಲಿ ಸಕಲ ಸೌಕರ್ಯಗಳಿರುವ ಶಾಲೆ ಪ್ರಾರಂಭಿಸಲಾಗುವುದು. ದೂರದ ಹಳ್ಳಿಗಳಿಂದ ಮಕ್ಕಳು ಈ ಶಾಲೆಗೆ ಆಗಮಿಸಲು ಸರ್ಕಾರವೇ ವಾಹನ ಸೌಲಭ್ಯ ಕಲ್ಪಿಸಲಿದೆ ಎಂದು ಸಚಿವರು ಹೇಳಿದರು. (ಸರಕಾರಿ ಕನ್ನಡ ಶಾಲೆಗಳಿಗೆ ಬೀಗ ಜಡಿದ ಕೋರ್ಟ್)
ಮಕ್ಕಳ ಕೊರತೆಯಿಂದ ಮುಚ್ಚಿರುವ ಶಾಲೆಗಳ ಕಟ್ಟಡಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುತ್ತದೆ. ಕಟ್ಟಡವನ್ನು ಅನ್ಯ ಕಚೇರಿಗಳಾಗಿ ಪಂಚಾಯಿತಿ ಉಪಯೋಗಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಎಂದರು.
ಶಿಕ್ಷಕರ ನೇಮಕ : ಮೇ 28ರಂದು ಶಿಕ್ಷಕರ ನೇಮಕ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗುವುದು. ಪ್ರಸ್ತುತ 16 ಸಾವಿರ ಶಿಕ್ಷಕರ ಕೊರತೆ ಇದೆ. ಕಳೆದ ವರ್ಷ 4 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಅಂತಿಮ ಹಂತದಲ್ಲಿ ನಿಲ್ಲಿಸಲಾಗಿದೆ.
ಹೈದರಾಬಾದ್ - ಕರ್ನಾಟಕ ಭಾಗದಲ್ಲಿ 371ನೇ ಕಾಲಂ ಜಾರಿಯಾಗಿರುವುದರಿಂದ ಶೇ.80 ಮೀಸಲು ಕಲ್ಪಿಸಬೇಕು ಆದ್ದರಿಂದ ಪ್ರಕ್ರಿಯೆ ತಡೆಹಿಡಿಯಲಾಗಿದೆ. ಗುಲ್ಬರ್ಗ ವಲಯದ ವ್ಯಾಪ್ತಿಗೆ ಬರುವ 1200 ಶಿಕ್ಷಕರನ್ನು ಬಿಟ್ಟು ಉಳಿದವರ ನೇಮಕಾರತಿಗಾಗಿ ಮೇ 28ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದರು.
ವರ್ಗಾವಣೆ ನೀತಿ ಜಾರಿಗೆ : ಶಿಕ್ಷಣ ಇಲಾಖೆಯಲ್ಲಿನ ವರ್ಗಾವಣೆ ಗೊಂದಲದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಇಲಾಖೆಯ ವರ್ಗಾವಣೆಗಾಗಿ ಕಾಯಿದೆ ಜಾರಿಗೆ ತರಲು ಚಿಂತಿಸಲಾಗಿದೆ. ತಜ್ಞರೊಂದಿಗೆ ಚರ್ಚಿಸಿ ಈ ಬಗ್ಗೆ ಶೀಘ್ರವೇ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.












Click it and Unblock the Notifications