ಪಿರಿಯಾಪಟ್ಟಣ : ಕೈ ಹಿಡಿದ ಕೆಜೆಪಿ ಅಭ್ಯರ್ಥಿ

ಬಿಜೆಪಿ ಅಭ್ಯರ್ಥಿ ನಿಧನದಿಂದಾಗಿ ಮುಂದೂಡಲ್ಪಟ್ಟ ಪಿರಿಯಾಪಟ್ಟಣ ಚುನಾವಣೆ ಕಾಂಗ್ರೆಸ್ ಪಕ್ಷದ ಪಾಲಿಗೆ ದೊಡ್ಡ ಸವಾಲಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಸಿದ್ದರಾಮಯ್ಯ ಸೋಮವಾರ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಅಭ್ಯರ್ಥಿಯ ಪರವಾಗಿ ಮತ ಯಾಚಿಸಿದರು.
ಕೆಜೆಪಿ ಪಕ್ಷ ಮಾಜಿ ಶಾಸಕ ಎಚ್.ಸಿ.ಬಸವರಾಜು ಅವರನ್ನು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು. ನಂತರ ಚುನಾವಣೆಯಲ್ಲಿ ತಟಸ್ಥವಾಗಿರುವ ನಿರ್ಧಾರ ಪ್ರಕಟಿಸಿತ್ತು. ಇದರಿಂದ ಕೋಪಗೊಂಡ ಬಸವರಾಜು ಸಿದ್ದರಾಮಯ್ಯ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಸೇರ್ಪಡೆಗೊಂಡರು.
ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಅನುಕಂಪಕದ ಆಧಾರದ ಮೇಲೆ ಮತ ಪಡೆದು ಜಯಗಳಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಅಲಂಕರಿಸಲು ಬಿಜೆಪಿ ಹವಣಿಸುತ್ತಿದೆ. ಆದರೆ, ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೈ ಸೇರಬಾರದು ಎಂದು ಜೆಡಿಎಸ್ ಪ್ರಯತ್ನ ನಡೆಸಿದೆ.
ಮೇ 28ರಂದು ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮೇ 31ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿಗೆ ಅನುಕಂಪ ಜಯ ದೊರೆಯುತ್ತದೆಯೋ? ಅಥವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದ ಪಿರಿಯಾಪಟ್ಟಣ ಕೈವಶವಾಗುತ್ತದೆಯೋ ಕಾದು ನೋಡಬೇಕು.
ಕ್ಷೇತ್ರ ಹೇಗಿದೆ : ಪಿರಿಯಾಪಟ್ಟಣ ಒಕ್ಕಲಿಗ ಸಮುದಾಯದ ಪ್ರಬಲ ಕೋಟೆಯಾಗಿದೆ. ಲಿಂಗಾಯತರು ಮತ್ತು ಕುರುಬ ಜನಾಂಗದ ಶಾಸಕರು ಒಮ್ಮೆ ಗೆದ್ದು ಬಂದಿದ್ದಾರೆ. ಒಕ್ಕಲಿಗರ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರವಿದು.
ಉಪ್ಪಾರ ಪರಿಶಿಷ್ಟ ಜಾತಿ, ಪಂಗಡದ ಮತಗಳು ಸಹ ಹೆಚ್ಚಾಗಿದ್ದು ಮತವಿಭಜನೆ ಆಗುವುದರ ಮೇಲೆ ಅಭ್ಯರ್ಥಿಯ ಗೆಲುವು ನಿರ್ಧರಿತವಾಗುತ್ತದೆ. ಕ್ಷೇತ್ರದಲ್ಲಿ 39,000 ಒಕ್ಕಲಿಗರಿದ್ದು, 37,000 ಕುರುಬರಿದ್ದಾರೆ. ಪರಿಶಿಷ್ಟ ಜಾತಿಯ 20,000 ಮತಗಳಿದ್ದು, ಲಿಂಗಾಯತರು 12,000 ಜನರಿದ್ದಾರೆ.
ಮತದಾರರು ಯಾರ ಪರವಾಗಿ ಒಲವು ಹೊಂದಿದ್ದಾರೆ. ಕ್ಷೇತ್ರ ಯಾರ ಪಾಲಾಗಲಿದೆ ಎಂಬುದು ಮೇ 31ರಂದು ನಿರ್ಧಾರವಾಗಲಿದೆ. ವಿವಿಧ ಪಕ್ಷಗಳು ಕ್ಷೇತ್ರದಲ್ಲಿ ಜಯಗಳಿಸಲು ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದು, ಯಾರಿಗೆ ಜಯ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications