ಬೆಂಗಳೂರು:ಕುಡಿಯುವ ನೀರಿನ ದಾಹ, ಮಳೆ ನಿರೀಕ್ಷೆ
ಬೆಂಗಳೂರು, ಮೇ.19: ಬೇಸಿಗೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವುದು ಸಾಮಾನ್ಯ. ಸಂಗ್ರಹವಿರುವ ನೀರನ್ನು ಎಲ್ಲ ನಗರಗಳಿಗೂ ಸೂಕ್ತವಾಗಿ ಸರಬರಾಜು ಮಾಡುವಂತೆ ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಮಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಕಾಣುತ್ತಿಲ್ಲ.
ಜನರಿಗೆ ತೊಂದರೆ ಆಗದಂತೆ ಕುಡಿಯುವ ನೀರು ಪೂರೈಸಲು ಸರ್ಕಾರ ಸಿದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಆದರೆ, ಜಲ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಅವರು ಮುಂದಿನ ವಾರ ಮಳೆಯಾಗದಿದ್ದರೆ ಈಗ ಇರುವ ನೀರಿನ ಸಂಗ್ರಹ ನಗರದ ಎಲ್ಲಾ ಭಾಗಕ್ಕೆ ಹಂಚಿಕೆ ಮಾಡಲು ಕಷ್ಟ ಎಂದಿದ್ದಾರೆ.
1964ರ ನಂತರ ಇದೇ ಮೊದಲ ಬಾರಿಗೆ ಬಿಡಬ್ಲ್ಯೂಎಸ್ ಎಸ್ ಬಿಗೆ ಈ ರೀತಿ ಭೀಕರ ಜಲಕ್ಷಾಮ ಎದುರಾಗಿದೆ. 100 ಮಿಲಿಯನ್ ಲೀಟರ್ಸ್ ಪ್ರತಿದಿನ ಕಾವೇರಿ ನೀರು ಪಡೆಯುತ್ತಿದ್ದರೂ ಸಾಲುತ್ತಿಲ್ಲ. ಮಳೆಯೊಂದೇ ನಮಗೆ ರಕ್ಷಣೆ ನೀಡಲು ಸಾಧ್ಯ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

ಬರಿದಾದ ಹೇಮಾ ಒಡಲು: ಹೇಮಾವತಿ ನದಿ ಜಲಾಶಯಗಳಲ್ಲೂ ಡೆಡ್ ಸ್ಟೋರೇಜ್ ಮಟ್ಟ ಮುಟ್ಟಿದೆ. ಅಲ್ಲಿಂದ ಕೆಆರ್ ಎಸ್ ಗೆ ನೀರು ಹರಿಸಿ ನಂತರ ಬೆಂಗಳೂರಿಗೆ ನೀರು ಪಡೆಯುವ ಉದ್ದೇಶ ಕೂಡಾ ವಿಫಲವಾಗುತ್ತಿದೆ. ಮುಂಗಾರು ಆಗಮನದವರೆಗೂ 2.6 ಟಿಎಂಎಸಿ ಅಡಿ ನೀರು ಅವಶ್ಯವಾಗಿದೆ. ಬೆಂಗಳೂರಿಗೆ 1,250 ಎಂಎಲ್ ಡಿ ನೀರು ಅಗತ್ಯವಿದ್ದು, ಜನತೆ ಕೂಡಾ ನೀರು ಪೊಲಾಗದಂತೆ ಎಚ್ಚರವಹಿಸುವಂತೆ ಜಲಮಂಡಳಿ ಕೋರಿದೆ.
ಬೆಂಗಳೂರು ನಗರಕ್ಕೆ 18 ಟಿಎಂಸಿ ಅಡಿ ಗಳಷ್ಟು ನೀರು ಪ್ರತಿ ವರ್ಷ ಬೇಕಾಗುತ್ತದೆ. ಪ್ರತಿ ತಿಂಗಳ ಬಳಕೆ ಸರಾಸರಿ 1.5 ಟಿಎಂಸಿ ಅಡಿಗಳಷ್ಟಿದೆ. ನಗರಕ್ಕೆ ಸರಬರಾಜು ಮಾಡುವ ನೀರಿನ ಪ್ರಮಾಣ 200 MLD(million litres per day) ದಾಟುತ್ತಿದೆ. ಆದರೆ, ಕಾವೇರಿ 4ನೇ ಘಟ್ಟ 2ನೇ ಹಂತದ ಕಾಮಗಾರಿ ಮುಕ್ತಾಯವಾಗಿರುವುದು ಸಮಸ್ಯೆಯನ್ನು ಬಗೆಹರಿಸಿದೆ.
ಮಳೆ ಆರ್ಭಟ: ಭಾನುವಾರ ಸಂಜೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಸುಮಾರು ಎರಡು ಗಂಟೆಯ ಕಾಲ ಮಳೆ ಸುರಿದಿದೆ. ಅನೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿ ನಾಗರಿಕರು ಮನೆಗೆ ತೆರಳಲು ಕಷ್ಟವಾಗಿತ್ತು.
ಪ್ರಮುಖ ಬಡಾವಣೆಗಳಾದ ಬಸವೇಶ್ವರನಗರ, ರಾಜಾಜಿನಗರ, ಜಯನಗರ, ಮಲ್ಲೇಶ್ವರ, ಹೆಬ್ಬಾಳ, ಬಸವನಗುಡಿ, ಬಿಟಿಎಂ ಲೇಔಟ್, ಶಾಂತಿನಗರ, ಎಂಜಿ ರಸ್ತೆ, ಕೆ.ಆರ್.ಮಾರ್ಕೆಟ್, ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ.
ಬೆಂಗಳೂರಿನಲ್ಲಿ ಇನ್ನೆರಡು ದಿನಗಳ ಕಾಲ ಒಣ ಹವೆ, ಜತೆಗೆ ಮೋಡ ಮುಸುಕಿದ ವಾತಾವರಣ ಕಾಣ ಬರಲಿದ್ದು, ಒಂದು ಅಥವಾ ಎರಡು ಬಾರಿ ನಗರದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಭಾನುವಾರದ ಮಳೆ ಪ್ರಮಾಣ 14.5 ಮಿ.ಮೀ ನಷ್ಟಿತ್ತು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ ತಿಳಿಸಿದ್ದಾರೆ.












Click it and Unblock the Notifications