ಬೆಂಗಳೂರಿಗೆ ನೀರಿನ ಕೊರತೆ ಇಲ್ಲ : ಸಿಎಂ ಸಿದ್ದು

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸಭೆ ನಡೆಸಿದ ಸಿದ್ದರಾಮಯ್ಯ, ನೀರಿನ ಲಭ್ಯತೆ, ಪೂರೈಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಂಗಾರು ಪ್ರಾರಂಭವಾಗುವ ತನಕ ಜನತೆಗೆ ಅಗತ್ಯ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.( ಸಂಪುಟ ಸಭೆಯ ನಿರ್ಣಯಗಳು)
ಶನಿವಾರ ಸಚಿವ ಸಂಪುಟ ಸಭೆಯಲ್ಲಿಯೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು. ನೀರಿನ ಅಭಾವ ಉಂಟಾದರೆ, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ನೂತನ ಸಚಿವರಿಗೆ ತಿಳಿಸಿದರು.
ಜನರಿಗೆ ಅಭಯ : ಶನಿವಾರ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬೇಸಿಗೆ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಲಭ್ಯವಿರುವ ನೀರನ್ನು ಎಲ್ಲ ನಗರಗಳಿಗೂ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜನರಿಗೆ ತೊಂದರೆ ಆಗದಂತೆ ಕುಡಿಯುವ ನೀರು ಪೂರೈಸಲು ಸರ್ಕಾರ ಸಿದ್ಧವಾಗಿದೆ. ಯಾವುದೇ ಜಿಲ್ಲೆಗಳ ಜನರು ನೀರಿನ ಕೊರತೆ ಉಂಟಾಗಲಿದೆ ಎಂದು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.( ನೂತನ ಸಚಿವರ ಪಟ್ಟಿ)
ಕೆಆರ್ಎಸ್ ನೀರಿನ ಮಟ್ಟ ಕುಸಿದಿದೆ. ಆದ್ದರಿಂದ ಬೆಂಗಳೂರಿಗೆ ಹೇಮಾವತಿ ಜಲಾಶಯದ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲ ಪ್ರದೇಶಗಳಿಗೆ ಕಡಿಮೆ ನೀರು ಸರಬರಾಜು ಆಗಬಹುದು. ಆದರೆ, ಸಂಪೂರ್ಣವಾಗಿ ನೀರಿನ ಸರಬರಾಜು ನಿಂತುಹೋಗುವುದಿಲ್ಲ ಎಂದು ಹೇಳಿದರು.
ಕಾವೇರಿ ನದಿ ನೀರನ್ನು ಅವಲಂಬಿಸಿರುವ ಮೈಸೂರು, ಮಂಡ್ಯ, ಮದ್ದೂರು, ಹಾಸನ ಸೇರಿದಂತೆ ಇತರೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೂ ನೀರಿನ ಅಭಾವ ಉಂಟಾಗದಂತೆ ಸರ್ಕಾರ ಎಚ್ಚರವಹಿಸಲಿದೆ. ಸಚಿವ ಸಂಪುಟ ಸಹೋದ್ಯೋಗಿಗಳಿಗೂ ನೀರಿನ ಪೂರೈಕೆ ಬಗ್ಗೆ ಪ್ರತಿದಿನವೂ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದರು.
ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಲಮಂಡಳಿ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಮಿತಿ ರಚಿಸಿಕೊಂಡು, ನೀರಿನ ಲಭ್ಯತೆ ಕುರಿತು ನಿತ್ಯ ಪರಾಮರ್ಶೆ ನಡೆಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.












Click it and Unblock the Notifications