ಮಿರ್ಜಿ ಮತ್ತೆ ಬೆಂಗಳೂರು ಪೊಲೀಸ್ ಕಮೀಷನರ್

ಶನಿವಾರ ಸಚಿವ ಸಂಪುಟ ವಿಸ್ತರಣೆ ನಂತರ ಆದೇಶ ಹೊರಡಿಸಿರುವ ಸರ್ಕಾರ, ರಾಘವೇಂದ್ರ ಔರಾದ್ಕರ್ ಅವರನ್ನು ವರ್ಗಾವಣೆಗೊಳಿಸಿದೆ. ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ರಾಘವೇಂದ್ರ ಔರಾದ್ಕರ್ ಅವರ ಸ್ಥಾನಕ್ಕೆ ನೇಮಿಸಲಾಗಿದೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ಜ್ಯೋತಿಪ್ರಕಾಶ್ ಮಿರ್ಜಿಯವರನ್ನು ಏ.23ರಂದು ವರ್ಗಾವಣೆಗೊಳಿಸಲಾಗಿತ್ತು. ರಾಜ್ಯ ಚುನಾವಣಾ ಆಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪತ್ರ ಬರೆದು ಮಿರ್ಜಿ ಅವರನ್ನು ವರ್ಗಾವಣೆ ಮಾಡುವಂತೆ ಸೂಚಿಸಿತ್ತು.
ತಮ್ಮ ಅವಧಿ ಪೂರ್ಣಗೊಳ್ಳದೇ ವರ್ಗಾವಣೆ ಮಾಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮಿರ್ಜಿ ಕೆಎಟಿ (ಕರ್ನಾಟಕ ಆಡಳಿತ ನ್ಯಾಯಮಂಡಳಿ)ಗೆ ಅರ್ಜಿ ಸಲ್ಲಿಸಿದ್ದರು. ನಗರ ಪೊಲೀಸ್ ಆಯುಕ್ತ ಸ್ಥಾನದಿಂದ ವರ್ಗಾವಣೆ ಮಾಡಿದ ನಂತರ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಸದ್ಯ ಚುನಾವಣೆ ಮುಗಿದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಮಿರ್ಜಿ ಅವರನ್ನು ಮರು ನೇಮಕ ಮಾಡಲಾಗಿದೆ.
ಆದರೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸ್ಥಾನದಿಂದ ವರ್ಗಾವಣೆಗೊಂಡಿರುವ ರಾಘವೇಂದ್ರ ಔರಾದ್ಕರ್ ಅವರನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಈ ಕುರಿತಾದ ಆದೇಶ ಎರಡು ದಿನದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಮಿರ್ಜಿ ಅವರ ಅಧಿಕಾರಾವಧಿ 6 ತಿಂಗಳು ಬಾಕಿ ಉಳಿದಿದೆ.
ಸವಾಲುಗಳಿದ್ದವು : ನಗರದ ಪೊಲೀಸ್ ಆಯುಕ್ತರಾಗಿದ್ದ ರಾಘವೇಂದ್ರ ಜೌರಾದ್ಕರ್ ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಪೋಟದ ತನಿಖೆಯನ್ನು ಕ್ಷಿಪ್ರಗತಿಯಲ್ಲಿ ಮುಂದುವರೆಸುತ್ತಿರುವುದು ಔರಾದ್ಕರ್ ಅವರ ಹೆಗ್ಗಳಿಗೆ ಆಗಿದೆ.












Click it and Unblock the Notifications