ಮೇ.21ರ ನಂತರ ಲೋಕಸಭೆ ಚುನಾವಣೆಗೆ ಕ್ಷಣಗಣನೆ?

ಇಬ್ಬರು ಸಂಸದರು ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಗಳಿಗೆ ನಿಮಯದ ಪ್ರಕಾರ ಇನ್ನು ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕಾಗುತ್ತದೆ. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಮತ್ತೊಮ್ಮೆ ಮತದಾನಕ್ಕೆ ಸಜ್ಜಾಗಬೇಕಿದೆ. ಆದರೆ, ಹಾಲಿ ಸಂಸತ್ತಿನ ಕಾಲಾವಧಿ ಒಂದು ವರ್ಷ ಕೂಡಾ ಇಲ್ಲದಿರುವಾಗ ಚುನಾವಣೆ ನಡೆಸಲು ಸಾಧ್ಯವೇ? ಆಯೋಗದಿಂದ ಉತ್ತರ ಸಿಗಬೇಕಿದೆ.
ಯಾವುದೇ ಚುನಾಯಿತ ಸರ್ಕಾರದ ಅವಧಿ ಆರು ತಿಂಗಳಿಗಿಂತ ಕಡಿಮೆ ಇದೆ ಎನ್ನುವ ಸಂದರ್ಭದಲ್ಲಿ ಮರು ಚುನಾವಣೆ ನಡೆಸುವ ಗೋಜಿಗೆ ಚುನಾವಣಾ ಆಯೋಗ ಯಾವ ಕಾರಣಕ್ಕೂ ಮುಂದಾಗದು. ಹಾಲಿ ಲೋಕಸಭೆ ಅವಧಿ 4 ವರ್ಷ ಮುಗಿದಿದೆ. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದೆ. ಹೀಗಾಗಿ ಆಗಸ್ಟ್- ಸೆಪ್ಟಂಬರ್ ಒಳಗೆ ಚುನಾವಣೆ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ವಿಧಾನಸಭೆ ಸದಸ್ಯತ್ವ ಉಳಿಸಿಕೊಳ್ಳಲು ನಿರ್ಧರಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಚಲುವರಾಯಸ್ವಾಮಿ ಅವರು ಈ ತಿಂಗಳ 21ರಂದು ತಮ್ಮ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಜೆಡಿಎಸ್ ಪ್ರಕಟಿಸಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಕುಮಾರಸ್ವಾಮಿ, ಮಂಡ್ಯ ಸಂಸದರಾಗಿರುವ ಚಲುವರಾಯಸ್ವಾಮಿ ಮೇ.21ಕ್ಕೆ ದೆಹಲಿಗೆ ತೆರಳಿ ಲೋಕಸಭೆ ಸ್ಪೀಕರ್ ಮೀರಾಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ, ಚಲುವರಾಯಸ್ವಾಮಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಗೆಲುವು ಸಾಧಿಸಿದ್ದರು. ಇಬ್ಬರೂ ಸಂಸದರು ತಮ್ಮ ವಿಧಾನಸಭೆ ಸದಸ್ಯತ್ವ ಉಳಿಸಿಕೊಳ್ಳಲು ನಿರ್ಧರಿಸಿರುವುದರಿಂದ ಲೋಕಸಭೆ ಸದಸ್ಯತ್ವ ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆ ಮೇರೆಗೆ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಜೆಡಿಎಸ್ ಸಂಸದರು ತೀರ್ಮಾನಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್‌ಗೆ ಅಧಿಕೃತ ಪ್ರತಿಪಕ್ಷ ಸ್ಥಾನಮಾನ ಲಭಿಸುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ.
ಅಸೆಂಬ್ಲಿಯಲ್ಲಿ ಕುಮಾರಸ್ವಾಮಿ ಅವರೇ ನಮ್ಮ ನಾಯಕರು ಎಂದು ಎಚ್ ಡಿ ರೇವಣ್ಣ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಕರ್ನಾಟಕದಲ್ಲೇ ಉಳಿಯಲು ನಿರ್ಧರಿಸಿರುವ ಕುಮಾರಸ್ವಾಮಿ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುವ ಆಸೆ ಹೊಂದಿದ್ದಾರೆ.












Click it and Unblock the Notifications