ಆಕ್ಷೇಪಾರ್ಹ ಕಾಮೆಂಟ್ : ಅನುಮತಿ ಇಲ್ಲದೆ ಬಂಧನವಿಲ್ಲ

ರಾಜ್ಯಪಾಲರಾದ ಕೆ.ರೋಸಯ್ಯ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿದ್ದಕ್ಕೆ ವಕೀಲೆಯನ್ನು ಹೈದರಾಬಾದ್ ನಲ್ಲಿ ಕಳೆದವಾರ ಬಂಧಿಸಲಾಗಿತ್ತು. ಈ ಬಗ್ಗೆ ಸಲ್ಲಿಸಲಾಗಿದ್ದ ಆಕ್ಷೇಪಣಾ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠ, ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದ ವ್ಯಕ್ತಿಯನ್ನು ಐಜಿಪಿ ಅಥವಾ ಡಿಪಿಪಿ ಅಥವಾ ಎಸ್ಪಿ ಮಟ್ಟದ ಅಧಿಕಾರಿಗಳ ಪೂರ್ವಾನುಮತಿ ಪಡೆಯದೇ ಪೊಲೀಸರು ಬಂಧಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರ 2013ರ ಜ.9ರಂದು ಆಕ್ಷೇಪಾರ್ಹ ಕಾಮೆಂಟ್ ಹಾಕುವವರನ್ನು ಹಿರಿಯ ಪೊಲೀಸ್ ಅಧಿಕಾರಿಯ ಒಪ್ಪಿಗೆಯಿಲ್ಲದೇ ಬಂಧಿಸಬಾರದು ಎಂದು ರಾಜ್ಯ ಸರ್ಕಾರಗಳಿಗೆ ಅನ್ವಯವಾಗುವ ಮಾರ್ಗದರ್ಶಿ ಸೂತ್ರ ರಚಿಸಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಈ ಮಾರ್ಗದರ್ಶಿ ಸೂತ್ರವನ್ನು ಪಾಲಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯ ಸೂಚಿಸಿತು. ಇದೇ ವೇಳೆ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡುವ ವ್ಯಕ್ತಿಗಳ ಬಂಧನವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಕೆ.ರೋಸಯ್ಯ ಅವರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ ಹಾಕಿರುವುದಕ್ಕೆ ವಕೀಲೆಯನ್ನು ಹೈದರಾಬಾದ್ ನ್ಯಾಯಾಲಯ ಜೈಲಿಗೆ ಕಳುಹಿಸಿತ್ತು.( ಮಾಜಿ ಸಿಎಂ ಮೇಲೆ ಕಾಮೆಂಟಿಗೆ ವಕೀಲೆ ಬಂಧನ)
ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿದ ಬೆಂಗಳೂರು ಮೂಲದ ಪ್ರದೀಪ್ ಬಾಗಲಕೋಟೆ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. (ಫೇಸ್ ಬುಕ್ ನಲ್ಲಿ ಅಂಬೇಡ್ಕರ್ ನಿಂದಿಸಿ ಜೈಲು ಸೇರಿದ)












Click it and Unblock the Notifications